ಶಿರಸಿಯ ಪ್ಲಾಂಟರ್ಸ ರಿಕ್ರಿಯೇಶನ್ ಅಸೋಸಿಯೇಶನ್’ನಲ್ಲಿ ಅಪರಾತಪರ ನಡೆದಿದೆ. ರಿಕ್ರಿಯೇಶನ್ ಅಸೋಸಿಯೇಶನ್’ನವರು ಬೈಲಾಗೆ ವಿರುದ್ಧವಾದ ಚಟುವಟಿಕೆಗಳನ್ನು ನಡೆಸಿದ್ದಾರೆ. ಈ ಎಲ್ಲಾ ವಿವರ ಸರ್ಕಾರಿ ಕಡತ ಸೇರಿದ್ದು, ಅದನ್ನು ನೋಂದಣಾಧಿಕಾರಿ ಕಚೇರಿ ಗಂಭೀರವಾಗಿ ಪರಿಗಣಿಸಿದೆ.
ಶಿರಸಿಯ ಪ್ಲಾಂಟರ್ಸ ರಿಕ್ರಿಯೇಶನ್ ಅಸೋಸಿಯೇಶನ್’ಗೆ ಈಗಾಗಲೇ ಸರ್ಕಾರದಿಂದ ನೋಟಿಸ್ ಜಾರಿಯಾಗಿದೆ. ಸಂಘದ ರದ್ಧತಿ ನೋಂದಣಿ ಮಾಡುವುದಾಗಿ ಎಚ್ಚರಿಕೆಯನ್ನು ಸಹ ನೀಡಲಾಗಿದೆ. ಆದರೆ, ನೋಂದಣಿ ರದ್ಧತಿ ಪೂರ್ವದಲ್ಲಿ ಸಂಘದ ಆಡಳಿತ ಮಂಡಳಿ ಅಹವಾಲಿಗೆ ಅವಕಾಶ ನೀಡಲಾಗಿದ್ದು, ಆ ಅವಕಾಶವನ್ನು ಆಡಳಿತ ಮಂಡಳಿಯವರು ಸರಿಯಾಗಿ ಬಳಸಿಕೊಂಡಿಲ್ಲ. ಜೂನ್ 5 ಹಾಗೂ ಜೂನ್ 19ರಂದು ಎರಡು ಬಾರಿ ಪ್ಲಾಂಟರ್ಸ ರಿಕ್ರಿಯೇಶನ್ ಅಸೋಸಿಯೇಶನ್’ಗೆ ನೋಟಿಸ್ ನೀಡಿದರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ.
ಈ ಹಿನ್ನಲೆ ಜಿಲ್ಲಾ ನೋಂದಣಾಧಿಕಾರಿ ಹಾಗೂ ಸಹಕಾರಿ ಸಂಘಗಳ ಉಪನಿಬಂಧಕರು ಈ ದಿನ ಕೊನೆಯ ಎಚ್ಚರಿಕೆ ನೀಡಿದ್ದಾರೆ. 3 ದಿನದ ಒಳಗೆ ಕಾರವಾರ ಹಬ್ಬುವಾಡದಲ್ಲಿರುವ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಬಾರದೇ ಇದ್ದರೆ ಕರ್ನಾಟಕ ಸಂಘಗಳ ಕಾಯ್ದೆ 1960 ರನ್ವಯ ನೋಂದಣಿ ರದ್ಧತಿಗೆ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ಎಚ್ಚರಿಸಿದ್ದಾರೆ.