`ಪ್ರಚಾರದ ತೆವಲಿಗೆ ಬಿದ್ದ ಕಾಂಗ್ರೆಸ್ ಮುಖಂಡ ಪ್ರಿಯಾಂಕ ಖರ್ಗೆ ಅವರು ಅನಗತ್ಯವಾಗಿ ಆರ್ ಎಸ್ ಎಸ್ ಹಾಗೂ ಬಿಜೆಪಿ ವಿರುದ್ಧ ಬೇಜವಬ್ದಾರಿಯಿಂದ ಮಾತನಾಡುತ್ತಿದ್ದಾರೆ. ಇದನ್ನು ಬಿಟ್ಟು ಉತ್ತಮ ಆಡಳಿತ ನೀಡುವ ಕಡೆ ಅವರು ಗಮನಹರಿಸಬೇಕು’ ಎಂದು ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಪ್ರಿಯಾಂಕ ಖರ್ಗೆ ಅವರ ಆದ್ಯತೆಯಾಗಬೇಕು. ಗ್ರಾಮೀಣ ಅಭಿವೃದ್ಧಿ ಸಚಿವರಾಗಿ ಕಳೆದ ಮೂರು ವರ್ಷಗಳಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ? ಪ್ರಸ್ತುತ ನಿರ್ವಹಿಸುತ್ತಿರುವ ಜವಾಬ್ದಾರಿಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ? ಎಂಬುದನ್ನು ಬಹಿರಂಗಪಡಿಸಬೇಕು’ ಎಂದು ಹೇಳಿದ್ದಾರೆ. `ರಾಜ್ಯದ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸದೆ ಆಧಾರರಹಿತ ಆರೋಪಗಳನ್ನು ಮಾಡುವುದರಿಂದ ರಾಜಕೀಯವಾಗಿ ಬೆಳೆಯಲು ಸಾಧ್ಯವಿಲ್ಲ’ ಎಂದು ಕಾಗೇರಿ ಕಿವಿಮಾತು ಹೇಳಿದ್ದಾರೆ.
`ಬಿ ಆರ್ ಅಂಬೇಡ್ಕರ್ ಅವರ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಗೊಳಿಸಿದ್ದ ಇಂದಿರಾ ಗಾಂಧಿಯವರಿಗೂ ಆರ್ ಎಸ್ ಎಸ್ ಅಥವಾ ಅಂದಿನ ಜನಸಂಘವನ್ನು ಹತ್ತಿಕ್ಕಲು ಸಾಧ್ಯವಾಗಲಿಲ್ಲ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. `ಬಿಜೆಪಿಯನ್ನು ರಾಜಕೀಯವಾಗಿ ದುರ್ಬಲಗೊಳಿಸಲು ಕಾಂಗ್ರೆಸ್ ಪಕ್ಷವು ಹಲವು ದಶಕಗಳಿಂದ ಪ್ರಯತ್ನಿಸುತ್ತಲೇ ಬಂದಿದೆ. ಆದರೆ ಇಂದು ಕಾಂಗ್ರೆಸ್ ಯಾವ ಸ್ಥಿತಿಗೆ ತಲುಪಿದೆ ಹಾಗೂ ಜನರಿಂದ ಹೇಗೆ ತಿರಸ್ಕಾರಕ್ಕೆ ಒಳಗಾಗಿದೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ’ ಎಂದರು.