ಜೂನ್ 1ರಿಂದ ಶಾಲೆ ಶುರುವಾಗಿದ್ದು, ಶಾಲೆ ಶುರುವಾದ ಮೊದಲ ದಿನದಿಂದಲೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯೂ ಜೋರಾಗಿದೆ. ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.
ಜೂನ್ 1ರಿಂದ ಜೂನ್ 3ರವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಬಗ್ಗೆ ಹವಾಮಾನ ತಜ್ಞರು ಅಂದಾಜಿಸಿದ್ದರು. ಆದರೆ, ಜೂನ್ 1ರ ಸಂಜೆ ಅದಕ್ಕೆ ವಿರುದ್ಧವಾಗಿ ಜೋರು ಮಳೆಯಾಗಿದೆ. ಅದಾಗಿಯೂ, ಜೂನ್ 2 ಹಾಗೂ 3ರಂದು ಸಹ ಸಾಧಾರಣ ಮಳೆಯಾಗುವ ಸಾಧ್ಯತೆಗಳಿರುವ ಬಗ್ಗೆ ವಿಪತ್ತು ಕೋಶದವರು ಮಾಹಿತಿ ನೀಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಕೋಶದವರ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಗರಿಷ್ಟ 15.5ಮಿಲಿ ಮೀಟರ್ ಮಳೆಯಾಗುವ ಲಕ್ಷಣಗಳಿವೆ.
ಸರ್ಕಾರ ನೀಡಿದ ಅಂಕಿ-ಸAಖ್ಯೆಗಳ ಪ್ರಕಾರ ಕಳೆದ 24 ತಾಸು ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 2.2ಮಿಲಿ ಮೀಟರ್ ಮಾತ್ರ ಮಳೆಯಾಗಿದೆ. ವಾಡಿಕೆಗಳ ಪ್ರಕಾರ ಈ ದಿನ ಜಿಲ್ಲೆಯಲ್ಲಿ 3.9ಮಿಲಿ ಮೀಟರ್ ಮಳೆಯಾಗಬೇಕಿದ್ದು, ಕಳೆದ ಏಳು ದಿನಗಳ ಸರಾಸರಿ ಮಳೆ ಪ್ರಮಾಣವೂ ಕಡಿಮೆಯಿದೆ. ಅದಾಗಿಯೂ, ಮುಂದಿನ ಎರಡು ದಿನಗಳಲ್ಲಿ ಮಳೆ ಪ್ರಮಾಣ ಏರಿಕೆಯಾಗುವ ಬಗ್ಗೆ ತಜ್ಞರು ಅಂದಾಜಿಸಿದ್ದಾರೆ. ಅದರಲ್ಲಿಯೂ, ಸೆಖೆಯಿಂದ ಬೆಂದಿರುವ ಕರಾವಳಿ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವ ನಿರೀಕ್ಷೆಗಳಿವೆ.