ಶಿರಸಿಯ ಸಹಸ್ರಳ್ಳಿಯ ಮನೆಯಲ್ಲಿ ಮಲಗಿದ್ದ ಬಾಲಕನಿಗೆ ಹಾವು ಕಚ್ಚಿದೆ. ವಿಷ ನೆತ್ತಿಗೇರಿದ ಪರಿಣಾಮ 12 ವರ್ಷದ ಮಿಥುನ್ ನಾಯ್ಕ ಅವರು ಸಾವನಪ್ಪಿದ್ದಾರೆ. ಮಿಥುನ್ ನಾಯ್ಕ ಅವರ ಜೊತೆಗಿದ್ದ ಸಹೋದರಿ ದೀಕ್ಷಾ ನಾಯ್ಕ ಅವರಿಗೂ ಹಾವು ಕಚ್ಚಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶಿರಸಿ ತಾಲೂಕಿನ ಬನವಾಸಿ ಬಳಿಯ ಸಹಸ್ರಳ್ಳಿಯಲ್ಲಿ ಪುಟ್ಟಪ್ಪ ನಾಯ್ಕ ಅವರು ವಾಸವಾಗಿದ್ದಾರೆ. ಪುಟ್ಟಪ್ಪ ನಾಯ್ಕ ಅವರಿಗೆ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಎಂಬ ಮಕ್ಕಳಿದ್ದು, ಬುಧವಾರ ಹಾವು ಕಚ್ಚಿದ ಕಾರಣ ಮಿಥುನ್ ನಾಯ್ಕ ಅವರು ಅಸುನೀಗಿದ್ದಾರೆ. ಮಂಗಳವಾರ ರಾತ್ರಿ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರು ಊಟ ಮುಗಿಸಿ ಮಲಗಿದ್ದರು. ತಂದೆಯೂ ಅವರ ಜೊತೆಯೇ ಇದ್ದರು. ಬುಧವಾರ ಬೆಳಗ್ಗೆ ಎದ್ದಾಗ ಮಿಥುನ್ ನಾಯ್ಕ ಹಾಗೂ ದೀಕ್ಷಾ ನಾಯ್ಕ ಅವರು ವಾಂತಿ ಮಾಡಿಕೊಂಡಿದ್ದು, ಆರೋಗ್ಯದಲ್ಲಿ ಏರುಪೇರಾಗಿದ್ದನ್ನು ಪಾಲಕರು ಗಮನಿಸಿದರು.
ಈ ವೇಳೆ ಮನೆಯಲ್ಲಿದ್ದ ಹಾವು ಹೊರಗೆ ಹೋಗಿದನ್ನು ಪುಟ್ಟಪ್ಪ ನಾಯ್ಕ ಅವರು ಗಮನಿಸಿದ್ದು, ಹಾವು ಕಚ್ಚಿದ ಪರಿಣಾಮ ಮಕ್ಕಳಿಬ್ಬರಿಗೂ ಸಮಸ್ಯೆ ಆಗಿರುವುದನ್ನು ಅರಿತು. ತಕ್ಷಣ ಪುಟ್ಟಪ್ಪ ನಾಯ್ಕ ಅವರು ಮಕ್ಕಳಿಬ್ಬರನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಶಿರಸಿಯ ಮಹಾಲಕ್ಷ್ಮೀ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಆಸ್ಪತ್ರೆ ಸೇರುವ ಮೊದಲೇ ಮಿಥುನ್ ನಾಯ್ಕ ಅವರು ಉಸಿರು ನಿಲ್ಲಿಸಿದ್ದರು.
ಮಿಥುನ್ ನಾಯ್ಕ ಅವರಿಗೆ ಕಿವಿಯ ಬಳಿ ಹಾವು ಕಚ್ಚಿದ್ದು ದೃಢವಾಗಿದೆ. ದೀಕ್ಷಾ ನಾಯ್ಕ ಅವರ ಕೈ ಬೆರಳಿಗೆ ಹಾವು ಕಚ್ಚಿದೆ. ಸದ್ಯ ದೀಕ್ಷಾ ನಾಯ್ಕ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಮಿಥುನ್ ನಾಯ್ಕ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬದವರಿಗೆ ಹಸ್ತಾಂತರಿಸುವ ಪ್ರಕ್ರಿಯೆ ನಡೆದಿದೆ.