ಅಂಕೋಲಾದಲ್ಲಿ ದಶಕದ ಹಿಂದೆ ಸಾವನಪ್ಪಿದವರು ಸಹ ಉಪನೋಂದಣಾಧಿಕಾರಿ ಕಚೇರಿಗೆ ಬಂದು ಭೂಮಿ ಮಾರಾಟ ಮಾಡಿದ ಬಗ್ಗೆ ದಾಖಲೆ ಸೃಷ್ಠಿಸಿದ ಪ್ರಕರಣ ಮತ್ತೊಂದು ಸ್ವರೂಪಪಡೆದಿದೆ. ಈ ಅಕ್ರಮದ ಹಿಂದೆ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ಕೈ ಕೆಲಸ ಮಾಡಿದ ಬಗ್ಗೆ ಅನುಮಾನ ಶುರುವಾಗಿದೆ.
ಬೋಗ್ರಿಬೈಲ್ ಬಳಿ ಈಚೆಗೆ ಜಮೀನು ಮಾರಾಟ ಪ್ರಕ್ರಿಯೆಯೊಂದು ನಡೆದಿತ್ತು. ಸಾವನಪ್ಪಿದವರ ಹೆಸರಿನಲ್ಲಿದ್ದ ಜಮೀನು ಸಹ ಮಾರಾಟವಾಗಿತ್ತು. ಸಾವನಪ್ಪಿದವರ ಹೆಸರಿನಲ್ಲಿ ಆಧಾರ್ ಕಾರ್ಡ ರಚಿಸಿ, ನಕಲಿ ವ್ಯಕ್ತಿಗಳ ಮೂಲಕ ಭೂಮಿ ಮಾರಾಟ ಮಾಡಿದ್ದು ಗಮನಕ್ಕೆ ಬಂದಿತ್ತು. ವಿಷಯ ಹೊರ ಬಂದ ನಂತರ ದಸ್ತಾವೇಜು ರದ್ಧಾಗಿದ್ದು, ಆರೋಪಿಗಳ ವಿರುದ್ಧ ಯಾವ ಕ್ರಮವೂ ಆಗಿಲ್ಲ. ತಪ್ಪಿತಸ್ಥರ ಬಗ್ಗೆ ಸಮಗ್ರ ತನಿಖೆಯೂ ನಡೆದಿಲ್ಲ. ಈ ಎಲ್ಲಾ ಹಿನ್ನಲೆ ಈ ಅಕ್ರಮದಲ್ಲಿ ಪ್ರಭಾವಿಗಳೇ ಶಾಮೀಲಾರಿಗುವ ಶಂಕೆ ಸ್ಥಳೀಯರನ್ನು ಕಾಡುತ್ತಿದೆ. ಜೊತೆಗೆ ಕೇಣಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅನುಕೂಲವಾಗುವ ಹಾಗೇ ಭೂಮಿ ಮಾರಾಟ ಪ್ರಕ್ರಿಯೆ ನಡೆದ ಬಗ್ಗೆಯೂ ಅನುಮಾನಗಳು ಶುರುವಾಗಿದೆ.
`ಬಂದರು ನಿರ್ಮಾಣದ ನಂತರ ಸರಕು-ಸಾಮಗ್ರಿಗಳ ದಾಸ್ತಾನಿಗೆ ಅನುಕೂಲವಾಗುವ ಹಾಗೇ ಪರ ಜಿಲ್ಲೆಯವರ ಹೆಸರಿನಲ್ಲಿ ಭೂಮಿ ಖರೀದಿ ಪ್ರಯತ್ನ ನಡೆದಿದೆ. ಬಂದರು ಚಟುವಟಿಕೆ ಚುರುಕುಗೊಳಿಸಲು ಭೂ ಅಕ್ರಮ ನಡೆಸಿರುವ ಸಾಧ್ಯತೆಗಳಿವೆ’ ಎಂದು ಅಂಕೋಲಾ ಸರ್ವ ಸಮಾಜಗಳ ಹಿತ ರಕ್ಷಣಾ ಒಕ್ಕೂಟದವರು ಹೇಳಿದ್ದಾರೆ. ಈ ಕುರಿತು ಅವರು ತಹಶೀಲ್ದಾರ್ ಕಚೇರಿಗೆ ಅರ್ಜಿಯನ್ನು ಸಲ್ಲಿಸಿದ್ದಾರೆ. ಅಕ್ರಮ ನಡೆದರೂ ಆ ಬಗ್ಗೆ ಗಂಭೀರವಾಗಿ ಪರಿಗಣಿಸಿದ ಕಾರಣ ಅವರು ಇನ್ನಷ್ಟು ಅನುಮಾನವ್ಯಕ್ತಪಡಿಸಿದ್ದಾರೆ.
ಸತ್ತವರಿಂದಲೂ ಭೂಮಿ ಮಾರಾಟ: ಸ್ವರ್ಗದಿಂದಲೇ ಸಹಿ ಮಾಡಿದ ಶೂರರು!
ಇದರೊಂದಿಗೆ ಅಲಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಬೋಗ್ರಿಬೈಲ್, ಶಿರಕುಳಿ ಹಾಗೂ ಸುತ್ತಲಿನ ಜನ ಸಹ ತಹಶೀಲ್ದಾರ್ ಕಚೇರಿಗೆ ಆಗಮಿಸಿ ಮತ್ತೊಂದು ಪತ್ರ ನೀಡಿದ್ದಾರೆ. `ಶಿವಮೊಗ್ಗದ ಶಿವಕುಮಾರ ಎಂಬಾತರಿಗೆ ಮಾರಾಟವಾದ ಭೂಮಿ ಹಗರಣದ ಬಗ್ಗೆ ತನಿಖೆ ನಡೆಯಬೇಕು. ಸಾವನಪ್ಪಿದವರ ಹೆಸರಿನಲ್ಲಿದ್ದ ಭೂಮಿಯನ್ನು ಮಾರಾಟ ಮಾಡಿದವರು ಯಾರು? ಮಾರಾಟ ಮಾಡಿಸಿದವರು ಯಾರು? ಎಂದು ಗೊತ್ತಾಗಬೇಕು’ ಎಂದು ಆಗ್ರಹಿಸಿದ್ದಾರೆ. `ಈ ಹಿಂದೆಯೂ ಇಂಥ ಅನೇಕ ಪ್ರಕರಣ ನಡೆದ ಸಾಧ್ಯತೆಗಳಿದ್ದು, ಅದೆಲ್ಲದರ ಬಗ್ಗೆ ತನಿಖೆ ನಡೆಯಬೇಕು’ ಎಂದು ಒತ್ತಾಯಿಸಿದ್ದಾರೆ.