ಅಂಕೋಲಾ ಹೆಬ್ಬುಳ ಬಳಿಯ ನಾಗೇಂದ್ರ ಗೌಡ ಹಾಗೂ ಅಗಸೂರಿನ ರಮ್ಯಾ ಪರಸ್ಪರ ಪ್ರೀತಿಸುತ್ತಿದ್ದು, ಪ್ರೀತಿ ಮುರಿದುಕೊಂಡ ಪರಿಣಾಮ ನಾಗೇಂದ್ರ ಗೌಡ ಅವರು ಬಾಂಬ್ ಸಿಡಿಸಿದ್ದಾರೆ. ಕಾರಿನೊಳಗೆ ಬಾಂಬ್ ಸಿಡಿದ ಪರಿಣಾಮ ನಾಗೇಂದ್ರ ಗೌಡ ಅವರು ಸುಟ್ಟು ಕರಕಲಾಗಿದ್ದಾರೆ.
ಅಂಕೋಲಾದ ಹೆಬ್ಬುಳದ ನಾಗೇಂದ್ರ ಗೌಡ ಹಾಗೂ ಅಗಸೂರಿನ ರಮ್ಯಾ ಅವರು ಆರು ವರ್ಷದಿಂದ ಪ್ರೀತಿಸುತ್ತಿದ್ದರು. ನಾಗೇಂದ್ರ ಗೌಡ ಅವರು ಬೆಂಗಳೂರಿಗೆ ಹೋಗಿದ್ದು, ರಮ್ಯಾ ಅವರು ಸಹ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಟೆಕ್ನಿಶಿಯನ್ ಆಗಿ ಕೆಲಸ ಮಾಡುತ್ತಿದ್ದರು. ಮದುವೆ ವಿಚಾರವಾಗಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ರಮ್ಯಾ ಅವರು ಮದುವೆ ನಿರಾಕರಿಸಿದ ಹಿನ್ನಲೆ ಅವರಿಬ್ಬರ ನಡುವೆ ಜಗಳವಾಗಿತ್ತು.
ಪ್ರೇಯಸಿಯನ್ನು ಸಮಾಧಾನ ಮಾಡುವುದಕ್ಕಾಗಿ ನಾಗೇಂದ್ರ ಗೌಡ ಅವರು ರಮ್ಯಾ ಅವರು ವಾಸವಿದ್ದ ಮನೆಗೆ ಹೋಗಿದ್ದರು. ಅಲ್ಲಿ ಉಬರ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ಬೆಂಗಳೂರಿನ ಜಯನಗರದಲ್ಲಿ ಅವರಿಬ್ಬರು ಕಾರು ಹತ್ತಿದ್ದು, ಅಂಕೋಲಾಗೆ ಬಿಡುವಂತೆ ಕೇಳಿಕೊಂಡಿದ್ದರು. ಅದಾದ ನಂತರ ಕಾರು ಅಂಕೋಲಾ ಕಡೆ ಓಡಿದ್ದು, ಪೆಟ್ರೋಲ್ ಬಂಕಿನಲ್ಲಿ ಇಂಧನ ಹಾಕಿಸುವಾಗ ನಾಗೇಂದ್ರ ಹಾಗೂ ರಮ್ಯಾ ಇಬ್ಬರು ಶೌಚಾಲಯಕ್ಕೆ ಹೋಗಿ ಬಂದರು. ಅದಾದ ನಂತರ ಅವರಿಬ್ಬರ ನಡುವೆ ಜಗಳ ಶುರುವಾಗಿತ್ತು. ಈ ನಡುವೆ ನಾಗೇಂದ್ರ ಅವರು ರಮ್ಯಾ ಅವರನ್ನು ಅಪಹರಿಸಿದ ಬಗ್ಗೆ ಪೊಲೀಸರು ಚಾಲಕ ಪ್ರವೀಣ ಅವರಿಗೆ ಫೋನ್ ಮಾಡಿದ್ದರು.
ರಮ್ಯಾ ಹಾಗೂ ನಾಗೇಂದ್ರ ಅವರು ಸಂಚರಿಸುತ್ತಿದ್ದ ಕ್ಯಾಬ್ ತುಮಕೂರಿನ ಶಿರಾ ಬಳಿ ತಲುಪಿದಾಗ ಅವರಿಬ್ಬರ ನಡುವೆ ದೊಡ್ಡ ಜಗಳವಾಯಿತು. ಈ ಜಗಳದಲ್ಲಿ ರಮ್ಯಾ ಅವರಿಗೆ ನಾಗೇಂದ್ರ ಅವರು ಚಾಕು ಚುಚ್ಚಿದ್ದು, ಇದನ್ನು ನೋಡಿದ ಕಾರು ಚಾಲಕ ಪ್ರವೀಣ ಕಾರನ್ನು ರಸ್ತೆ ಅಂಚಿಗೆ ನಿಲ್ಲಿಸಿದರು. ಈ ವೇಳೆ ರಮ್ಯಾ ಅವರು `ಕಾರಿನಲ್ಲಿ ಬಾಂಬ್ ಇದೆ’ ಎಂದು ಕಿರುಚಿದರು. ತಕ್ಷಣ ರಮ್ಯಾ ಅವರ ಜೊತೆ ಪ್ರವೀಣ ಅವರು ಕಾರಿನಿಂದ ದೂರ ಸಾಗಿದ್ದು, ಅಷ್ಟರಲ್ಲಿ ಕಾರು ಸ್ಪೋಟಗೊಂಡಿತು. ಆ ಸ್ಪೋಟದಲ್ಲಿ ನಾಗೇಂದ್ರ ಗೌಡ ಅವರು ಅಲ್ಲಿಯೇ ಸಾವನಪ್ಪಿದರು.
ಮದುವೆಗೆ ಒಪ್ಪದ ರಮ್ಯಾ ಅವರನ್ನು ಸಾಯಿಸುವ ಉದ್ದೇಶದಿಂದ ನಾಗೇಂದ್ರ ಗೌಡ ಅವರು ಬಾಂಬ್ ತಂದಿದ್ದು, ಒಂದು ಬಾಂಬನ್ನು ಚಾಲಕ ಪ್ರವೀಣ ದೂರ ಎಸೆದಿದ್ದರು. ಅದಾಗಿಯೂ, ನಾಗೇಂದ್ರ ಅವರ ಬಳಿಯಿದ್ದ ಮತ್ತೆರಡು ಬಾಂಬ್ ಸ್ಪೋಟಿಸಿ ಕಾರು ಸಹ ಸುಟ್ಟಿತು. ಗಾಯಾಳು ರಮ್ಯಾ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.