ಯಲ್ಲಾಪುರ ರವೀಂದ್ರ ನಗರದ ಸಂತೋಷ ಪಾಟೀಲ್ ಅವರು ತಮ್ಮ ಪತ್ನಿ ಮುನಿಸಿಕೊಂಡ ಕಾರಣ ಪ್ರಾಣ ಬಿಟ್ಟಿದ್ದಾರೆ. ದೂರವಾದ ಪತ್ನಿ ಮತ್ತೆ ಮನೆಗೆ ಬರದ ಬೇಸರದಲ್ಲಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಲ್ಲಾಪುರ ಶಿರಸಿ ರಸ್ತೆಯ ಎಪಿಎಂಸಿ ಎದುರಿನ ರವೀಂದ್ರ ನಗರ ಬಳಿ ಸಂತೋಷ ಮನೋಹರ ಪಾಟೀಲ್ (47) ಅವರು ವಾಸವಾಗಿದ್ದರು. ಕೂಲಿ ಕೆಲಸ ಮಾಡಿ ಅವರು ಬದುಕು ಕಟ್ಟಿಕೊಂಡಿದ್ದರು. ದುಡಿಮೆಯ ಹಣವನ್ನು ಅವರು ಸರಾಯಿ ಅಂಗಡಿಗೆ ವಿನಿಯೋಗಿಸುತ್ತಿದ್ದರು. ಸರಾಯಿ ನಶೆಯಲ್ಲಿ ಮನೆಗೆ ಬರುವ ಸಂತೋಷ ಪಾಟೀಲ್ ಅವರು ಪತ್ನಿ ಅನುಷಾ ಪಾಟೀಲ್ ಅವರ ಜೊತೆ ಜಗಳ ಮಾಡುವುದು ಸಾಮಾನ್ಯವಾಗಿತ್ತು.
ಸಂತೋಷ ಪಾಟೀಲ್ ಅವರು ಪದೇ ಪದೇ ಜಗಳವಾಡುವುದನ್ನು ಸಹಿಸಿಕೊಳ್ಳಲಾಗದೇ ಅನುಷಾ ಅವರು ಮನೆ ಬಿಟ್ಟಿದ್ದರು. ಪತ್ನಿ ತವರು ಸೇರಿದ ಕಾರಣ ಸಂತೋಷ ಪಾಟೀಲ್ ಅವರು ಇನ್ನಷ್ಟು ಬೇಸರಕ್ಕೆ ಒಳಗಾಗಿದ್ದರು. ಜೂನ್ 26ರಂದು ಮನೆಯೊಳಗೆ ಹೋದ ಸಂತೋಷ್ ಪಾಟೀಲ್ ಅವರು ಹೊರಗೆ ಬರಲಿಲ್ಲ. ಜೂನ್ 27ರ ಬೆಳಗ್ಗೆ 9.45ಕ್ಕೆ ಅವರು ಆತ್ಮಹತ್ಯೆಗೆ ಶರಣಾಗಿರುವುದನ್ನು ಅವರ ತಮ್ಮ ಶ್ರೀಕಾಂತ ಪಾಟೀಲ್ ಅವರು ನೋಡಿದರು.
ಶ್ರೀಕಾಂತ ಪಾಟೀಲ್ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಯಲ್ಲಾಪುರ ಪಿಸೈ ಮಹಾವೀರ ಕಾಂಬಳೆ ಅವರು ಸ್ಥಳಕ್ಕೆ ಭೇಟಿ ನೀಡಿದರು. ನಂತರ ಪ್ರಕರಣ ದಾಖಲಿಸಿ, ಕಾನೂನು ಕ್ರಮ ಜರುಗಿಸಿದರು.