ಜೊಯಿಡಾದ ಬಾಮಣಗಿಯಲ್ಲಿನ ಕೊಟ್ಟಿಗೆಯಲ್ಲಿ ಐದು ಕಾಲು ಹೊಂದಿದ ಆಕಳು ಜನಿಸಿದೆ. ಪುಟ್ಟ ಕರುವಿನ ಬೆನ್ನ ಮೇಲೆ ಒಂದು ಕಾಲಿದೆ.
ಜೊಯಿಡಾದ ಬಾಮಣಗಿಯಲ್ಲಿ ಪರಶುರಾಮ ಗೌಡ ಅವರು ವಾಸವಾಗಿದ್ದಾರೆ. ಕೃಷಿ ಜೊತೆ ಅವರು ಹೈನುಗಾರಿಕೆಯನ್ನು ಅತ್ಯಂತ ಶೃದ್ಧೆಯಿಂದ ಮಾಡುತ್ತಿದ್ದಾರೆ. ಮಂಗಳವಾರ ಅವರ ಕೊಟ್ಟಿಗೆಯಲ್ಲಿ ಆಕಳೊಂದು ಕರು ಹಾಕಿದೆ. ಆ ಕರುವಿಗೆ ಒಟ್ಟು ಐದು ಕಾಲುಗಳಿವೆ.
ಯಾವುದೇ ವೈದ್ಯಕೀಯ ನೆರವು ಇಲ್ಲದೇ ಹಸು ಸಹಜವಾಗಿ ಕರುವಿಗೆ ಜನ್ಮ ನೀಡಿದೆ. ಕೊಟ್ಟಿಗೆಯಲ್ಲಿ ಈ ದಿನ ಗಂಡು ಕರುವಿನ ಜನನವಾಗಿದ್ದು, ಆ ಕರು ಸಹ ಆರೋಗ್ಯವಾಗಿಯೇ ಇದೆ. ಸಾಮಾನ್ಯವಾಗಿ ದೈಹಿಕ ನ್ಯೂನ್ಯತೆಗಳಿರುವ ಕರು ಜನನದ ವೇಳೆ ಹಸು ಸಾಕಷ್ಟು ಸಮಸ್ಯೆಗೆ ಸಿಲುಕುತ್ತದೆ. ಆದರೆ, ಇಲ್ಲಿ ಸಹಜ ಹೆರಿಗೆಯಾಗಿದ್ದು, ವಿಚಿತ್ರ ಕರು ನೋಡಲು ಜನ ಆಗಮಿಸುತ್ತಿದ್ದಾರೆ.
ಕರುವಿನ ಬೆನ್ನಿನ ಮೇಲಿರುವ ಕಾಲಿಗೂ ಜೀವವಿದೆ. ಇತರ ಅಂಗಗಳ ಹಾಗೇ ಆ ಕಾಲು ಸಹ ಚಲನೆಗೆ ಒಳಪಡುತ್ತಿದೆ. ಆದರೆ, ಅದರಿಂದ ಕರುವಿಗೆ ಯಾವ ಪ್ರಯೋಜನವೂ ಇಲ್ಲ. ಕರು ಬೆಳೆದ ಹಾಗೇ ಆ ಕಾಲು ಸಹ ಬೆಳವಣಿಗೆಯಾಗುವ ಸಾಧ್ಯತೆಯಿದ್ದು, ಚಿಕಿತ್ಸೆ ಮೂಲಕ ಆ ಕಾಲನ್ನು ತುಂಡರಿಸುವ ಚಿಂತನೆ ನಡೆದಿದೆ.