ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 8ರಿಂದ 10ರ ಬೆಳಗ್ಗೆ 8.30ರವರೆಗೆ ಭಾರೀ ಪ್ರಮಾಣದ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನಲೆ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಅವರು ನೀಡಿದ ಮುನ್ಸೂಚನೆ ಪ್ರಕಾರ ಜೀನ್ 10ರವರೆಗೂ ಜಿಲ್ಲೆಯಲ್ಲಿ ಹೆಚ್ಚಿನ ಮಳೆ ಸುರಿಯುವ ಸಾಧ್ಯತೆಗಳಿವೆ. ಮಳೆ ಅವಘಡ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ಹವಾಮಾನ ಪರಿಸ್ಥಿತಿಯ ಬಗ್ಗೆ ಜನ ಜಿಲ್ಲಾಡಳಿತದ ಜಾಲತಾಣ ಹಾಗೂ ಸ್ಥಳೀಯ ಮಾಧ್ಯಮಗಳ ಮೂಲಕ ಮಾಹಿತಿಪಡೆಯುವಂತೆ ಸೂಚಿಸಲಾಗಿದೆ.
ರೆಡ್ ಅರ್ಲರ್ಟ ಘೋಷಣೆಯ ಈ ಅವಧಿಯಲ್ಲಿ ಮೀನುಗಾರರು ಸಮುದ್ರ ಪ್ರದೇಶಗಳಿಗೆ ಹೋಗದಂತೆ ಸೂಚಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಹೋಗದಂತೆ ಸಾರ್ವಜನಿಕರು ಹಾಗೂ ಮುಖ್ಯವಾಗಿ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆವಹಿಸಬೇಕು ಎಂದು ಜಿಲ್ಲಾಡಳಿತ ತಿಳಿಸಿದೆ. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ/ನೀರಿರುವ ಪ್ರದೇಶ ಮತ್ತು ಸಮುದ್ರಕ್ಕೆ ಹೋಗುವಂತಿಲ್ಲ. ಕೃಷಿಕರು ಮಳೆ-ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರುವು ಉತ್ತಮ ಎಂದು ಜಿಲ್ಲಾಡಳಿತ ಹೇಳಿದೆ.
`ಅಪಾಯಕಾರಿ ಮರ, ವಿದ್ಯುತ್ ಕಂಬದ ಹತ್ತಿರವೂ ಜನ ಹೋಗಬಾರದು. ಹಳೆಯ ಕಟ್ಟಡಗಳಲ್ಲಿ ಆಶ್ರಯಪಡೆಯಬಾರದು’ ಎಂದು ಸೂಚಿಸಲಾಗಿದೆ. `ಸಾರ್ವಜನಿಕರು ತಗ್ಗು ಪ್ರದೇಶದಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಸ್ಥಳಾಂತರವಾಗಬೇಕು. ಅಗತ್ಯವಿದ್ದರೆ ಕಾಳಜಿ ಕೇಂದ್ರಕ್ಕೆ ಬರಬೇಕು’ ಎಂದು ಜಿಲ್ಲಾಡಳಿತ ಮನವಿ ಮಾಡಿದೆ. ತುರ್ತು ಸನ್ನಿವೇಶಗಳಿದ್ದರೆ ಇಲ್ಲಿ ಫೋನ್ ಮಾಡಿ: 08382-229857, ವಾಟ್ಸಪ್: 9483511015