ವಧು-ವರರ ಸಿದ್ಧತೆ, ಹಳದಿ ಶಾಸ್ತ್ರ ಮಂಟಪ ಪ್ರವೇಶ, ಮಾಂಗಲ್ಯ ಧಾರಣೆ, ಸಪ್ತಪದಿ ಸೇರಿ ವಿವಿಧ ಹಂತಗಳಲ್ಲಿ ಮದುವೆಯ ಸಂಭ್ರಮ ಸೆರೆಹಿಡಿಯುವ ಕಾರವಾರದ ಫೋಟೋಗ್ರಾಫರ್’ಗಳು ಇನ್ಮುಂದೆ ಮದುವೆ ದಿಬ್ಬಣದ ಕಾರ್ಯಕ್ಕೆ ಮಾತ್ರ ಸಿಗುವುದಿಲ್ಲ. ಭವಿಷ್ಯದಲ್ಲಿ ಮದುವೆ ದಿಬ್ಬಣದ ಫೋಟೋ-ವಿಡಿಯೋ ಮಾಡುವುದನ್ನು ನಿಷೇಧಿಸಿ ಕಾರವಾರ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಠರಾವು ಹೊರಡಿಸಿದೆ!
ADVERTISEMENT
`ಮದುವೆ ಸಮಾರಂಭಗಳಲ್ಲಿ ಮದು ಮಗನ ಮನೆಗೆ ಸಾಗುವ ದಿಬ್ಬಣ (ಬಾರಾತ್) ಕಾರ್ಯಕ್ರಮಗಳ ಫೋಟೊ ಹಾಗೂ ವಿಡಿಯೊ ಚಿತ್ರೀಕರಣವನ್ನು ಇನ್ನು ಮುಂದೆ ಮಾಡದಿರಲು ಕಾರವಾರ ತಾಲೂಕು ಫೋಟೋಗ್ರಾಫರ್ ಅಸೋಸಿಯೇಷನ್ ಮಹತ್ವದ ನಿರ್ಧಾರ ಕೈಗೊಂಡಿದೆ’ ಎಂಬ ವಿಷಯವನ್ನು ಕಾರವಾರ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಸಂತಾನ್ ಫರ್ನಾಂಡೀಸ್ ಅವರು ಸುದ್ದಿಗಾರರ ಬಳಿ ಹೇಳಿದ್ದಾರೆ. `ಮದುವೆ ದಿಬ್ಬಣ ಕಾರ್ಯಕ್ರಮಗಳು ತಡರಾತ್ರಿವರೆಗೂ ನಡೆಯುತ್ತಿರುವುದರಿಂದ ಫೋಟೋ-ವಿಡಿಯೋ ಮಾಡುವುದು ಅಸಾಧ್ಯ’ ಎಂದವರು ಸಮಸ್ಯೆ ವಿವರಿಸಿದ್ದಾರೆ. `ಫೋಟೋಗ್ರಾಫರ್‌ಗಳು ಹಾಗೂ ವಿಡಿಯೊಗ್ರಾಫರ್‌ಗಳು ನಿಗದಿತ ಸಮಯ ಮೀರಿಯೂ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಚಿತ್ರೀಕರಣದ ವೇಳೆ ಫೋಟೋಗ್ರಾಫರ್ ಜೊತೆ ಕೆಲವರು ಅನುಚಿತ ವರ್ತನೆ ನಡೆಸುತ್ತಿದ್ದು, ದುಬಾರಿ ಬೆಲೆಯ ಕ್ಯಾಮರಾ ಕಸಿಯುವ ಪ್ರಯತ್ನವೂ ನಡೆದಿದೆ. ಸಿಬ್ಬಂದಿ ಹಾಗೂ ಉಪಕರಣ ಸುರಕ್ಷತೆ ಕಾರಣ ದಿಬ್ಬಣದ ಫೋಟೋ-ವಿಡಿಯೋ ಮಾಡುವುದನ್ನು ನಿಷೇಧಿಸಲಾಗಿದೆ’ ಎಂದವರು ವಿವರಿಸಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
`ಇನ್ನು ಮುಂದೆ ಮದುವೆ ಮಂಟಪ ಅಥವಾ ಕಲ್ಯಾಣ ಮಂಟಪದ ಒಳಗಡೆಯ ಕಾರ್ಯಕ್ರಮಗಳಿಗೆ ಮಾತ್ರ ಫೋಟೊ ಹಾಗೂ ವಿಡಿಯೊ ಚಿತ್ರೀಕರಣ ಸೀಮಿತಗೊಳಿಸಲು ನಿರ್ಧರಿಸಲಾಗಿದೆ. ದಿಬ್ಬಣ ಕಾರ್ಯಕ್ರಮಗಳ ಚಿತ್ರೀಕರಣದಿಂದ ದೂರ ಉಳಿಯಲು ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ’ ಎಂದವರು ಮಾಹಿತಿ ನೀಡಿದ್ದಾರೆ. `ಫೋಟೋಗ್ರಫಿ ಕ್ಷೇತ್ರದಲ್ಲಿ ಬಳಸುವ ಕ್ಯಾಮೆರಾ, ಲೈಟಿಂಗ್ ಸೇರಿದಂತೆ ವಿವಿಧ ಉಪಕರಣಗಳ ಬೆಲೆ ಹಾಗೂ ನಿರ್ವಹಣಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿರುವ ಕಾರಣ ಪಾಸ್‌ಪೋರ್ಟ್ ಸೈಜ್ ಫೋಟೊ ಸೇರಿದಂತೆ ವಿವಿಧ ಫೋಟೋಗ್ರಫಿ ಸೇವೆಗಳ ದರ ಪರಿಷ್ಕರಣೆ ಮಾಡಲಾಗುತ್ತಿದೆ’ ಎಂದು ಸಂಘದ ಗೌರವಾಧ್ಯಕ್ಷ ಸೂರಜ್ ಜೋಗಳೇಕರ್ ಅವರು ತಿಳಿಸಿದರು. ಫೋಟೋಗ್ರಾಫರ್ ಸಂಘ ಮಾಡಿದ ನಿರ್ಣಯಕ್ಕೆ ಸದಸ್ಯರಾದ ರವಿ ನಾಯ್ಕ, ಅನಂತ ಪೈ, ಜಯಪ್ರಕಾಶ್ ಗೋಸಾವಿ, ಅನಿಲ್ ನಾಯ್ಕ, ಮನೋಜ ನಾಯ್ಕ, ಪ್ರಮೋದ ನಾಯ್ಕ ಇತರರು ಬೆಂಬಲವ್ಯಕ್ತಪಡಿಸಿದರು.