`ತoಬಾಕು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅಸ್ಮಿತೆ ಫೌಂಡೇಶನ್ ಜನ ಜಾಗೃತಿ ಕಾರ್ಯ ನಡೆಸುತ್ತಿದ್ದು, ಈ ದಿನ ಡಿವೈಎಸ್ಪಿ ಗೀತಾ ಪಾಟೀಲ್ ಅವರಿಂದ ಅರಿವು ಕಾರ್ಯಕ್ರಮ ನಡೆಸಲಾಗಿದೆ. ಬಿ ಆರ್ ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಗೀತಾ ಪಾಟೀಲ್ ಅವರು ಪಾಠ ಮಾಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ, ಇಂಡಿಯನ್ ಕ್ಯಾನ್ಸರ್ ಸೊಸೈಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಗ್ರೀನ್ ಕೇರ್ ಸಂಸ್ಥೆ ಹಾಗೂ ಅಸ್ಮಿತೆ ಫೌಂಡೇಶನ್ ಸಹಯೋಗದಲ್ಲಿ ಈ ಕಾರ್ಯಾಗಾರ ನಡೆದಿದ್ದು, `ಒಳ್ಳೆಯ ಹವ್ಯಾಸ, ಉತ್ತಮ ಆರೋಗ್ಯ ಹಾಗೂ ಉನ್ನತ ಗುರಿ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ’ ಎಂದು ಡಿವೈಎಸ್ಪಿ ಗೀತಾ ಪಾಟೀಲ್ ಅವರು ಮಕ್ಕಳಿಗೆ ಕಿವಿಮಾತು ಹೇಳಿದ್ದಾರೆ. `ಮಾಜದಲ್ಲಿ ತಂಬಾಕು ಸೇವನೆಯಿಂದ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಅತ್ಯಂತ ಅಗತ್ಯವಾಗಿದೆ. ವಿದ್ಯಾರ್ಥಿಗಳು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯದ ಗುರಿಗಳನ್ನು ದೊಡ್ಡದಾಗಿ ಕಾಣಬೇಕು’ ಎಂದವರು ಕರೆ ನೀಡಿದ್ದಾರೆ.
`ವಿದ್ಯಾರ್ಥಿ ಜೀವನವು ಭವಿಷ್ಯ ರೂಪಿಸಿಕೊಳ್ಳುವ ಅತ್ಯಂತ ಪ್ರಮುಖ ಹಂತವಾಗಿದ್ದು, ಈ ಸಂದರ್ಭದಲ್ಲಿ ಕೆಟ್ಟ ಚಟಗಳಿಂದ ದೂರವಿರಬೇಕು. ಶಿಕ್ಷಣ, ಆರೋಗ್ಯ ಮತ್ತು ಉತ್ತಮ ಜೀವನದ ಕಡೆಗೆ ಗಮನ ಹರಿಸಬೇಕು. ಜೀವನದಲ್ಲಿ ದೊಡ್ಡ ಕನಸುಗಳನ್ನು ಕಾಣಬೇಕು, ಆ ಕನಸುಗಳನ್ನು ನನಸು ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು’ ಎಂದು ಪ್ರೇರಣಾದಾಯಕ ಮಾತುಗಳನ್ನು ಆಡಿದ್ದಾರೆ. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜ ಬಂಡಿಗೇರ ಅವರು ಮಾತನಾಡಿ `ವಿದ್ಯಾರ್ಥಿಗಳ ಆರೋಗ್ಯವು ಅವರ ಶೈಕ್ಷಣಿಕ ಪ್ರಗತಿ ಮತ್ತು ಭವಿಷ್ಯದ ಯಶಸ್ಸಿಗೆ ಪ್ರಮುಖ ಆಧಾರವಾಗಿದೆ. ಬಾಲ್ಯ ಮತ್ತು ಕಿಶೋರಾವಸ್ಥೆಯಲ್ಲಿಯೇ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಉತ್ತಮ ಆರೋಗ್ಯ ಅಭ್ಯಾಸಗಳನ್ನು ಬೆಳೆಸಲು ಸಹಕಾರಿಯಾಗುತ್ತವೆ’ ಎಂದು ಹೇಳಿದ್ದಾರೆ. ಅಸ್ಮಿತೆ ಫೌಂಡೇಶನ್‌ನ ಕಾರ್ಯನಿರ್ವಾಹಕ ನಿರ್ದೇಶಕ ಡಾ ರಿಯಾಜ್ ಸಾಗರ್ ಅವರು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಸಹಯೋಗದೊಂದಿಗೆ ನಡೆದ ಜಾಗೃತಿ ಅಧಿವೇಶನದಲ್ಲಿ ತಂಬಾಕು ಸೇವನೆಯಿಂದ ಉಂಟಾಗುವ ವಿವಿಧ ಆರೋಗ್ಯ ಸಮಸ್ಯೆಗಳು ಹಾಗೂ ಕ್ಯಾನ್ಸರ್‌ಗೆ ಇರುವ ಸಂಬAಧದ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದ್ದಾರೆ. ತಂಬಾಕು ಸೇವನೆಯು ದೇಹದ ವಿವಿಧ ಅಂಗಾAಗಗಳ ಮೇಲೆ ಬೀರುವ ದುಷ್ಪರಿಣಾಮಗಳು, ಕ್ಯಾನ್ಸರ್ ಉಂಟಾಗುವ ಅಪಾಯ, ತಂಬಾಕು ವ್ಯಸನಕ್ಕೆ ಒಳಗಾದವರು ತ್ಯಜಿಸಬಹುದಾದ ವಿಧಾನ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಕುರಿತು ಅವರು ವಿವರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗ್ರೀನ್ ಕೇರ್ ಸಂಸ್ಥೆಯ ಕಾರ್ಯದರ್ಶಿ ಜಿತೇಂದ್ರ ಕುಮಾರ್ ಆರ್ ಎಂ, ಆರೋಗ್ಯ ಇಲಾಖೆಯ ಡಾ ಸ್ಮೃತಿ ಅವರು ಹಾಜರಿದ್ದರು. ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ತಪಾಸಣೆಯೂ ನಡೆದಿದ್ದು, ಐಸಿಟಿಸಿ ಕೌನ್ಸೆಲರ್ ಗಿರಿಜಾ ಹೆಗಡೆ ಅವರು ಕಿಶೋರಾವಸ್ಥೆಯಲ್ಲಿ ಎದುರಾಗುವ ಆರೋಗ್ಯ ಸವಾಲುಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಅರಿವು ಮೂಡಿಸಿದರು. ಜಾಗೃತಿ ಕಾರ್ಯಕ್ರಮದ ನಂತರ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಹಿಮೋಗ್ಲೋಬಿನ್ ಪರೀಕ್ಷೆ ನಡೆಸಲಾಯಿತು. ಲ್ಯಾಬ್ ಟೆಕ್ನಿಷಿಯನ್ ಮಂಜುನಾಥ ಪಾಟಗಾರ, ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ಸಮನ್ವಯಾಧಿಕಾರಿ ರೋಹಿಣಿ ಸೈಲ್, ಗ್ರೀನ್ ಕೇರ್ ಸಂಸ್ಥೆಯ ಅಫ್ಸಾನ, ಅಸ್ಮಿತೆ ಫೌಂಡೇಶನ್ ಸಂಯೋಜಕಿ ಲಕ್ಷ್ಮಿ, ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವಸತಿ ನಿಲಯದ ವಾರ್ಡನ್ ನೇತ್ರಾವತಿ ಅವರು ವಿವಿಧ ಜವಾಬ್ದಾರಿ ನಿಭಾಯಿಸಿದರು.