ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 30ರಿಂದ ಜುಲೈ 2ರವರೆಗೆ 40ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಗಳಿವೆ. ಅದರೊಂದಿಗೆ ಜೋರು ಮಳೆಯೂ ಬರುವ ಲಕ್ಷಣಗಳಿವೆ. ಹೀಗಾಗಿ ಎಲ್ಲರೂ ಎಚ್ಚರಿಕೆಯಿಂದಿರಬೇಕು ಎಂದು ಡೀಸಿ ಕೆ ಲಕ್ಷಿಪ್ರಿಯಾ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದವರು ಜಿಲ್ಲಾಡಳಿತಕ್ಕೆ ಮಳೆ-ಗಾಳಿಯ ಮುನ್ಸೂಚನೆ ನೀಡಿದ್ದಾರೆ. ಅದರ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 30 ಮಧ್ಯಾಹ್ನ 1 ಗಂಟೆಯಿoದ ಜುಲೈ 2ರ ಬೆಳಗ್ಗೆ 8.30ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಈ ಅವಧಿಯಲ್ಲಿ 30-40ಕಿಮೀ ಗಾಳಿಯ ವೇಗದೊಂದಿಗೆ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ತುರ್ತು ಪರಿಸ್ಥಿತಿ ನಿಭಾಯಿಸುವುದಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಾರ್ಯಾಚರಣೆ ಕೇಂದ್ರವನ್ನು ತೆರೆಯಲಾಗಿದೆ. ವೇಗದ ಗಾಳಿ ಹಾಗೂ ಮಳೆ ಬೀಳುವ ಅವಧಿಯಲ್ಲಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆಗೆ ಹೋಗದಂತೆ ಸೂಚಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಹೋಗದಂತೆಯೂ ಜನರಿಗೆ ಸೂಚನೆ ನೀಡಲಾಗಿದೆ. ಮುಖ್ಯವಾಗಿ ಮಕ್ಕಳ ಬಗ್ಗೆ ಕಾಳಜಿವಹಿಸುವಂತೆ ತಿಳಿಸಲಾಗಿದೆ.
ಕೃಷಿಕರು ಮಳೆ-ಸಿಡಿಲಿನಂತಹ ಸಂದರ್ಭದಲ್ಲಿ ಕೃಷಿ ಚಟುವಟಿಕೆಯಿಂದ ದೂರವಿರುವುದು ಉತ್ತಮ. ಮಳೆ ಬರುವಾಗ ಜನ ಹೊರಗೆ ತಿರುಗಾಡದೇ ಸೂಕ್ತ ಕಟ್ಟಡದಲ್ಲಿ ಆಶ್ರಯಪಡೆಯುವುದು ಸೂಕ್ತ. ಅಪಾಯಕಾರಿ ಮರ, ವಿದ್ಯುತ್ ಕಂಬದ ಹತ್ತಿರ ಸುಳಿಯದಂತೆಯೂ ಜಿಲ್ಲಾಡಳಿತ ಸೂಚಿಸಿದೆ. ದುರ್ಬಲವಾದ ಕಟ್ಟಡ ಅಥವಾ ಮರಗಳ ಹತ್ತಿರ ನಿಲ್ಲದಂತೆಯೂ ಮತ್ತೊಮ್ಮೆ ತಿಳಿಸಲಾಗಿದೆ. ತಗ್ಗು ಪ್ರದೇಶದಲ್ಲಿ ಅಥವಾ ಮಳೆಯಿಂದ ಅಪಾಯಕ್ಕೀಡಾಗುವ ಪ್ರದೇಶದಲ್ಲಿ ವಾಸವಿದ್ದಲ್ಲಿ ಅಲ್ಲಿಂದ ಸ್ಥಳಾಂತರವಾಗಬೇಕು. ಅಗತ್ಯವಿದ್ದಲ್ಲಿ ಈಗಾಗಲೇ ತೆರೆದ ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆಯಬೇಕು. ಕಾಲುಸಂಕ, ಕಿರು ಸೇತುವೆ ದಾಟುವಾಗ ಎಚ್ಚರಿಕೆವಹಿಸಬೇಕು ಎಂದು ಡೀಸಿ ಮನವಿ ಮಾಡಿದ್ದಾರೆ. ಶಿಥಿಲಾವಸ್ಥೆಯಿರುವ ಅಥವಾ ಕುಸಿತದ ಹಂತದ ಕಂಪೌAಡ್ ಅಥವಾ ಮನೆಯಗೋಡೆ ಕಂಡುಬAದಲ್ಲಿ ಇಲ್ಲಿ ವಾಟ್ಸಪ್ ಮಾಡಿ: 9483511015