ಕೆಲವರಿಗೆ ಹಸಿವಾದಾಗ ಸಣ್ಣ ವಿಷಯಕ್ಕೂ ಕೋಪ ಬರುತ್ತದೆ. ಯಾರಾದರೂ ಮಾತನಾಡಿದರೂ ಕಿರಿಕಿರಿ ಅನಿಸುತ್ತದೆ. ಕೆಲಸದ ಮೇಲೆ ಗಮನ ಹರಿಸಲು ಕಷ್ಟವಾಗುತ್ತದೆ. ಇದನ್ನು ಸಾಮಾನ್ಯವಾಗಿ ಹ್ಯಾಂಗರ್ (Hanger) ಎಂದು ಕರೆಯಲಾಗುತ್ತದೆ. ಅಂದರೆ ಹಸಿವು ಮತ್ತು ಕೋಪ ಎರಡೂ ಒಂದೇ ಸಮಯದಲ್ಲಿ ಕಾಣಿಸಿಕೊಳ್ಳುವ ಸ್ಥಿತಿ. ಇದು ಸಾಮಾನ್ಯವಾಗಿ ಕಾಣಿಸಿಕೊಳ್ಳುವುದೇಕೆ ?
ನಾವು ಆಹಾರ ಸೇವಿಸಿದಾಗ ದೇಹಕ್ಕೆ ಬೇಕಾದ ಶಕ್ತಿ ಗ್ಲೂಕೋಸ್ ರೂಪದಲ್ಲಿ ಸಿಗುತ್ತದೆ. ಮೆದುಳು ಸರಿಯಾಗಿ ಕಾರ್ಯನಿರ್ವಹಿಸಲು ಗ್ಲೂಕೋಸ್ ಅತ್ಯಗತ್ಯ. ಆದರೆ ದೀರ್ಘ ಸಮಯ ಊಟ ಮಾಡದೇ ಇದ್ದರೆ ರಕ್ತದಲ್ಲಿನ ಗ್ಲೂಕೋಸ್ ಮಟ್ಟ ಕಡಿಮೆಯಾಗಲು ಆರಂಭವಾಗುತ್ತದೆ. ಇದರಿಂದ ಮೆದುಳಿಗೆ ಬೇಕಾದಷ್ಟು ಶಕ್ತಿ ದೊರೆಯದೆ, ಮನಸ್ಥಿತಿಯಲ್ಲೂ ಬದಲಾವಣೆ ಕಾಣಿಸಬಹುದು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದಾಗ ದೇಹವು ತುರ್ತು ಪರಿಸ್ಥಿತಿಯನ್ನು ಎದುರಿಸಲು ಕೆಲವು ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ. ಇವುಗಳಲ್ಲಿ ಅಡ್ರಿನಲಿನ್ ಮತ್ತು ಕಾರ್ಟಿಸೋಲ್ ಪ್ರಮುಖವಾಗಿವೆ. ಈ ಹಾರ್ಮೋನುಗಳು ದೇಹವನ್ನು ಎಚ್ಚರ ಸ್ಥಿತಿಗೆ ತರುತ್ತವೆ. ಪರಿಣಾಮವಾಗಿ ಅಸಹನೆ, ಆತಂಕ, ಉದ್ವಿಗ್ನತೆ ಹಾಗೂ ಕೋಪ ಹೆಚ್ಚಾಗುತ್ತದೆ.
ಇದರ ಜೊತೆಗೆ ಹಸಿವು ಹೆಚ್ಚಾದಾಗ ಮೆದುಳಿನ ಭಾವನೆಗಳನ್ನು ನಿಯಂತ್ರಿಸುವ ಸಾಮರ್ಥ್ಯವೂ ಸ್ವಲ್ಪ ಮಟ್ಟಿಗೆ ಕುಂಠಿತವಾಗಬಹುದು. ಆದ್ದರಿಂದ ಸಾಮಾನ್ಯವಾಗಿ ಸಹಿಸಿಕೊಳ್ಳುವ ವಿಷಯಗಳೂ ಆ ಸಮಯದಲ್ಲಿ ಹೆಚ್ಚು ಕಿರಿಕಿರಿ ಉಂಟುಮಾಡಬಹುದು. ಇದೇ ಕಾರಣಕ್ಕೆ ಹಸಿವಾದಾಗ ಕೆಲವರು ತಾಳ್ಮೆ ಕಳೆದುಕೊಳ್ಳುವುದು ಸಾಮಾನ್ಯವಾಗಿದೆ. ತಜ್ಞರ ಪ್ರಕಾರ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಈ ಸಮಸ್ಯೆಯನ್ನು ಕಡಿಮೆ ಮಾಡಲು ಸಹಕಾರಿ. ಬೆಳಗಿನ ಉಪಾಹಾರವನ್ನು ಬಿಡುವುದು, ಹೆಚ್ಚು ಹೊತ್ತು ಹೊಟ್ಟೆ ಖಾಲಿ ಇಡುವುದು ಅಥವಾ ಅಸಮಯದಲ್ಲಿ ಊಟ ಮಾಡುವುದರಿಂದ ಹಸಿವು ಮತ್ತು ಅದರೊಂದಿಗೆ ಬರುವ ಕೋಪ ಹೆಚ್ಚಾಗುತ್ತದೆ.
ಆದ್ದರಿಂದ ಆಗಾಗ್ಗೆ ಕೋಪ ಬರುತ್ತಿದೆ ಎಂದು ಅನಿಸಿದರೆ, ಅದರ ಹಿಂದೆ ಹಸಿವೂ ಒಂದು ಕಾರಣವಾಗಿರಬಹುದು ಎಂಬುದನ್ನು ಗಮನಿಸಬೇಕು. ಸಮತೋಲನಯುತ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಮತ್ತು ನಿಯಮಿತ ಸಮಯದಲ್ಲಿ ಊಟ ಮಾಡುವುದರಿಂದ ದೇಹದ ಜೊತೆಗೆ ಮನಸ್ಸಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬಹುದು.