ವರ್ಷದ ಹಿಂದೆ ಗಡಿಪಾರಾಗಿದ್ದ ಪ್ರಶಾಂತ ನಾಯ್ಕ ಅವರು ಎಲ್ಲಡೆ ಕದ್ದು-ಮುಚ್ಚಿ ಓಡಾಡುತ್ತಿದ್ದು, ಅದು ಪೊಲೀಸರಿಗೆ ಗೊತ್ತಾಗಿದೆ. ಗಡಿಪಾರು ಆದೇಶ ಉಲ್ಲಂಘಿಸಿದ ಕಾರಣ ಪೊಲೀಸರು ಪ್ರಶಾಂತ ನಾಯ್ಕ ಅವರ ವಿರುದ್ಧ ಮತ್ತೊಂದು ಕೇಸು ದಾಖಲಿಸಿದ್ದಾರೆ.
ಅಂಕೋಲಾದ ಬೊಬ್ರುವಾಡ ಕಟ್ಟೆ ಬಳಿಯ ಪ್ರಶಾಂತ ಕಿಶೋರ ನಾಯ್ಕ (ಪಚ್ಚಿ) ಅವರು ವಾಸವಾಗಿದ್ದರು. ಚಾಲಕರಾಗಿ ಜೀವನ ನಡೆಸುತ್ತಿದ್ದ ಅವರು ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ದಿನದಿಂದ ದಿನಕ್ಕೆ ಅವರ ಅಪರಾಧ ಜಗತ್ತು ವಿಸ್ತರಣೆಯಾಗುತ್ತಲೇ ಹೋಯಿತು. ಪರಿಣಾಮ ಅಂಕೋಲಾದಲ್ಲಿಯೇ ಅವರ ವಿರುದ್ಧ 19 ಪೊಲೀಸ್ ಪ್ರಕರಣಗಳು ದಾಖಲಾದವು. ದೂರುದಾರರಿಗೆ ಬೆದರಿಕೆ, ಸಾಕ್ಷಿದಾರರನ್ನು ಹೆದರಿಸುವುದರ ಜೊತೆ ಕಳ್ಳತನ ಮಾಡುವುದನ್ನು ಸಹ ಪ್ರಶಾಂತ ನಾಯ್ಕ ಅವರು ರೂಢಿಸಿಕೊಂಡಿದ್ದರು.
ಪ್ರಶಾAತ ನಾಯ್ಕ ಅವರ ವರ್ತನೆ ವಿಪರೀತ ಆದಾಗ ಪೊಲೀಸರಿಂದಲೂ ಅದನ್ನು ಸಹಿಸಲು ಸಾಧ್ಯವಾಗಲಿಲ್ಲ. ಸರಾಯಿ ಕುಡಿದು ಕೆಟ್ಟದಾಗಿ ಬೈಯುತ್ತಿದ್ದ ಪ್ರಶಾಂತ ನಾಯ್ಕ ಅವರ ವರ್ತನೆಯಿಂದ ಅನೇಕರಿಗೆ ನೆಮ್ಮದಿಯಿರಲಿಲ್ಲ. ಇತರರಿಗೂ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿದ್ದ ಪ್ರಶಾಂತ ನಾಯ್ಕ ಅವರನ್ನು ಊರು ಬಿಟ್ಟು ಓಡಿಸಲು ನಿರ್ಧರಿಸಿದರು. 2024ರಲ್ಲಿಯೇ ಅವರನ್ನು ಗಡಿಪಾರು ಮಾಡಲು ಪೊಲೀಸರು ಉಪವಿಭಾಗಾಧಿಕಾರಿಗಳಿಗೆ ಮನವಿ ಮಾಡಿದರು.
2025ರ ಜುಲೈ 29ರಂದ ಕುಮಟಾ ಉಪವಿಭಾಗಾಧಿಕಾರಿಗಳಿಂದ ಗಡಿಪಾರು ಆದೇಶ ಹೊರಡಿಸಿದ್ದರು. 1 ವರ್ಷಗಳ ಕಾಲ ಉತ್ತರ ಕನ್ನಡ ಜಿಲ್ಲೆಗೆ ಕಾಲಿಡದಂತೆ ಎಚ್ಚರಿಕೆ ನೀಡಿದ್ದರು. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸಹಿ ಹಾಕುವ ರೂಢಿ ಮಾಡಿಸಿದ್ದರು. ಪೊಲೀಸರೇ ಪ್ರಶಾಂತ ನಾಯ್ಕ ಅವರನ್ನು ಹುಬ್ಬಳ್ಳಿ ಪೊಲೀಸ್ ಠಾಣೆಗೆ ಬಿಟ್ಟು ಬಂದಿದ್ದರು. ಆದರೆ, ಅದೇ ಊರಿನಲ್ಲಿರದ ಪ್ರಶಾಂತ ನಾಯ್ಕ ಕದ್ದು ಮುಚ್ಚಿ ಎಲ್ಲಾ ಕಡೆ ಓಡಾಟ ನಡೆಸಿದ್ದು, ಅದು ಪೊಲೀಸರಿಗೆ ಗೊತ್ತಾಯಿತು. ಈ ಹಿನ್ನಲೆ ಅಂಕೋಲಾ ಪಿಸೈ ಗುರುನಾಥ ಹಾದಿಮನಿ ಅವರು ಪ್ರಶಾಂತ ನಾಯ್ಕ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದರು.