ಶಿರಸಿಯ ಆಕಾಶ ಕಾನಗೌಡರ್ ಅವರು ತಮ್ಮ ಸ್ನೇಹಿತರ ಜೊತೆ ಸಿದ್ದಾಪುರದ ಭೀಮನಗುಡ್ಡಕ್ಕೆ ಹೋಗಿದ್ದು ಅಲ್ಲಿ ಅವರ ಮೇಲೆ ದಾಳಿ ನಡೆದಿದೆ. ಭೀಮನಗುಡ್ಡದ ಬಳಿ ಜೋರಾಗಿ ಬೊಬ್ಬೆ ಹೊಡೆದ ಅವರಿಗೆ ಮಹೇಶ ನಾಯ್ಕ ಹಾಗೂ ಮತ್ತೆ ಮೂವರು ಸೇರಿ ಕಲ್ಲಿನಿಂದ ಹೊಡೆದಿದ್ದಾರೆ.
ಶಿರಸಿ ಬನವಾಸಿ ರಸ್ತೆಯ ಶ್ರೀ ನಗರದ ಬಳಿ ಆಕಾಶ ಶಂಕರ್ ಕಾನಗೌಡರ್ (29) ಅವರು ವಾಸವಾಗಿದ್ದಾರೆ. ಖಾಸಗಿ ಕಂಪನಿಯೊAದರ ಉದ್ಯೋಗಿಯಾಗಿರುವ ಅವರು ಪ್ರವಾಸಕ್ಕಾಗಿ ಯೋಚಿಸಿದ್ದು, ತಮ್ಮ ಸ್ನೇಹಿತರ ಜೊತೆ ಸಿದ್ದಾಪುರದ ನಿಲ್ಕುಂದ ಬಳಿಯಿರುವ ಭೀಮನಗುಡ್ಡಕ್ಕೆ ಹೋಗಲು ನಿರ್ಧರಿಸಿದ್ದಾರೆ. ಅದರಂತೆ ಜುಲೈ 11ರಂದು ಅವರು ವಿಕಾಸ ಶಂಕರ್ ಕಾನಗೌಡರ್, ಶಿವಮೊಗ್ಗದ ನವೀನ ವೀರಭದ್ರಗೌಡ, ಸೌಮ್ಯಾ ಹಾಗೂ ಮೆಲೋನಿಯಾ ಅವರ ಜೊತೆ ಅಲ್ಲಿ ಪ್ರವಾಸಕ್ಕೆ ಹೋಗಿದ್ದಾರೆ. ದಿನವಿಡೀ ಮೋಜು-ಮಸ್ತಿ ಮಾಡಿದ ಅವರೆಲ್ಲರೂ ಸಂಜೆ ಅಲ್ಲಿಂದ ಮರಳುವಾಗ ಜೋರಾಗಿ ಕೂಗಿದ್ದಾರೆ.
6.30ರ ವೇಳೆಗೆ ಅಲ್ಲಿಗೆ ಆಗಮಿಸಿದ ಮಹೇಶ ನಾಯ್ಕ ಎಂಬಾತರು `ಇಲ್ಲಿ ಏಕೆ ಗಲಾಟೆ ಮಾಡುವಿರಿ?’ ಎಂದು ಪ್ರಶ್ನಿಸಿದ್ದಾರೆ. `ನಾವು ನಿಮಗೇನು ಹೇಳಿಲ್ಲ’ ಎಂದು ಆಕಾಶ ಕಾನಗೌಡರ್ ಅವರು ಪ್ರತಿಕ್ರಿಯಿಸಿದ್ದಾರೆ. ಮಹೇಶ ನಾಯ್ಕ ಅವರ ಜೊತೆ ಮತ್ತೆ ಮೂವರಿದ್ದು, ಅವರೆಲ್ಲರೂ ಸೇರಿ ಆ ಸ್ನೇಹಿತರ ಗುಂಪನ್ನು ಬೆದರಿಸಿದ್ದಾರೆ. ಅದಾದ ನಂತರ ಕಲ್ಲು ತೂರಾಟ ಮಾಡಿದ್ದಾರೆ. ಆಕಾಶ, ವಿಕಾಸ ಹಾಗೂ ನವೀನ ಅವರಿಗೆ ಕಲ್ಲು ತಾಗಿ ನೋವಾಗಿದೆ.