ಮಾಜಿ ಶಾಸಕ ಸುನೀಲ ಹೆಗಡೆ ಅವರ ಆಪ್ತ ಹಾಗೂ ಬಿಜೆಪಿ ಜಿಲ್ಲಾ ಓಬಿಸಿ ಪ್ರಧಾನ ಕಾರ್ಯದರ್ಶಿ ಗಣಪತಿ ಕರಂಜೇಕರ್ ಅವರ ಹಳಿಯಾಳದಲ್ಲಿ ದಾದಾಗಿರಿ ಮಾಡಿದ್ದು, ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿ ಮೇಲೆ ನಡೆದ ದಾಳಿಯನ್ನು ಕಾಂಗ್ರೆಸ್ ಖಂಡಿಸಿದೆ. ಹಳಿಯಾಳದಲ್ಲಿ ಇಂಥ ಚಟುವಟಿಕೆ ಸಹಿಸುವುದಿಲ್ಲ ಎಂದು ಎಂದು ಬ್ಲಾಕ್ ಕಾಂಗ್ರೆಸ್ ವಕ್ತಾರ ಉಮೇಶ ಬೋಳಶೆಟ್ಟಿ ಅವರು ಹೇಳಿದ್ದಾರೆ.
ಬಿಜೆಪಿ ಪ್ರಮುಖ ಗಣಪತಿ ಕರಂಜೇಕರ್ ಅವರು ತಮ್ಮ ಸಹಚರರ ಜೊತೆ ಸೇರಿ ಕೆಸರೊಳ್ಳಿಯ ಮೀನಿನ್ ಸೂಜ್ ಅವರಿಗೆ ಥಳಿಸಿದ್ದರು. ಮೀನಿನ್ ಸೋಜ್ ಅವರು ನೆಲಕ್ಕೆ ಬಿದ್ದ ನಂತರ ನಾಲ್ವರು ಸೇರಿ ಅವರನ್ನು ಬಡಿಗೆಯಿಂದ ಬಡಿದಿದ್ದರು. ಕೆಸರೊಳ್ಳಿಯಲ್ಲಿ ಕೆರೆಯ ನೀರು ಬಿಟ್ಟ ವಿಷಯವಾಗಿ ಜಗಳ ನಡೆದಿದ್ದು, ಅದೇ ಹೊಡೆದಾಟದ ಸ್ವರೂಪಪಡೆದಿತ್ತು. ಈ ಪ್ರಕರಣದಲ್ಲಿ ಸತೀಶ ಅಶೋಕ ಕರಂಜೇಕರ್, ಶಿವಾಜಿ ಸಹದೇವ ಕರಂಜೇಕರ್, ಲೋಕಪ್ಪಾ ಸಹದೇವ ಕರಂಜೆಕರ್ ಸಹ ಆರೋಪಿಯಾಗಿದ್ದರು. ನಂತರ ಈ ವಿಷಯ ರಾಜಕೀಯ ಸ್ವರೂಪಪಡೆದಿದ್ದು, ಬಿಜೆಪಿ ಪ್ರಮುಖ ಶಿವಾಜಿ ನರಸಾನಿ ಅವರು ಗಣಪತಿ ಕರಂಜೇಕರ್ ಅವರ ಪರವಾಗಿ ಕೆಲಸ ಮಾಡಿದ್ದರು.
ಸದ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ್ ಹಾಗೂ ಕಾಂಗ್ರೆಸಿಗರು ಸುದ್ದಿಗೋಷ್ಠಿ ನಡೆಸಿ ಈ ಹೊಡೆದಾಟವನ್ನು ಖಂಡಿಸಿದ್ದಾರೆ. `ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾಜಿ ನರಸಾನಿ ಕೆಸರೊಳ್ಳಿ ಗ್ರಾಮಕ್ಕೆ ತೆರಳಿ ಸತ್ಯಶೋಧನೆ ಮಾಡದೆ ಏಕಪಕ್ಷೀಯವಾಗಿ ಹಲ್ಲೆ ನಡೆಸಿರುವ ತನ್ನದೇ ಪಕ್ಷದ ಗಣಪತಿ ಕರಂಜೆಕರ್ ಪರವಾಗಿ ತಹಶೀಲ್ದಾರ್ ಹಾಗೂ ಪಿಎಸ್‌ಐ ಅವರಿಗೆ ಮನವಿ ಸಲ್ಲಿಸಿದ್ದಾರೆ. ಬಿಜೆಪಿ ಪಕ್ಷ ಅಲ್ಪಸಂಖ್ಯಾತರ ವಿರೋಧಿ ಎಂದು ಈ ಮನವಿಯಿಂದ ಸಾಭೀತಾಗಿದೆ’ ಎಂದವರು ಹೇಳಿದ್ದಾರೆ. `ಘಟನೆಗೆ ಕಾರಣ ಎನ್ನಲಾದ ವ್ಯಕ್ತಿ ಕರಂಜೇಕರ್ ಮತ್ತು ಆತನ ಪರವಾಗಿ ಮನವಿ ಸಲ್ಲಿಸಿದ ವ್ಯಕ್ತಿ ಶಿವಾಜಿ ನರಸಾನಿ ಇಬ್ಬರೂ ಕೂಡ ಮಾಜಿ ಶಾಸಕ ಸುನಿಲ್ ಹೆಗಡೆ ಅವರ ಗರಡಿಯಲ್ಲಿ ಪಳಗಿದವರಾಗಿದ್ದಾರೆ. ಮಾಜಿ ಶಾಸಕರ ಅರಿವಿಗೆ ಬಾರದೇ ಈ ಎಲ್ಲಾ ಘಟನೆ ನಡೆಯಲು ಅಸಾಧ್ಯ. ಇದರಲ್ಲಿ ಸುನೀಲ ಹೆಗಡೆ ಅವರ ಕುಮ್ಮಕ್ಕು ಇದೆ’ ಎಂದು ಆರೋಪಿಸಿದ್ದಾರೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾ ಪಾಟೀಲ ಮಾತನಾಡಿ `ಪ್ರಕರಣವನ್ನು ಶಾಸಕರ ಗಮನಕ್ಕೆ ತರಲಾಗಿದ್ದು, ಸತ್ಯಾಸತ್ಯತೆ ಪರಿಶೀಲಿಸಿ ಪಕ್ಷಾತೀತವಾಗಿ ತನಿಖೆ ನಡೆಸುವಂತೆ ಆರ್ ವಿ ದೇಶಪಾಂಡೆ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಾಲೂಕಿನಲ್ಲಿ ಸಾಮಾಜಿಕ ಸೌಹಾರ್ದ ಮತ್ತು ಬಂಧುತ್ವದ ವಾತಾವರಣವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಸದಾ ಬದ್ಧವಾಗಿದೆ’ ಎಂದರು.