ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಡಿಜೆ ಬಳಕೆ ನಿಷೇಧಿಸಿ ಡೀಸಿ ಆದೇಶಿಸಿದ್ದು, ಹೊನ್ನಾವರದ ಆರೋಳ್ಳಿಯಲ್ಲಿ ಆ ಆದೇಶ ಉಲ್ಲಂಘನೆಯಾಗಿದೆ. ಸಾರ್ವಜನಿಕರಿಗೆ ಸಮಸ್ಯೆಯಾಗುವ ಹಾಗೇ ಅಲ್ಲಿನ ಗಣೇಶ ಉತ್ಸವ ಸಮಿತಿಯವರು ಡಿಜೆ ಬಳಕೆ ಮಾಡಿದ್ದಾರೆ.
ಹೊನ್ನಾವರದ ಆರೋಳ್ಳಿ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಧ್ವನಿವರ್ಧಕ ಬಳಸುವುದಕ್ಕಾಗಿ ಅನುಮತಿಪಡೆದ ಅವರು `ಯಾರಿಗೂ ಗೊತ್ತಾಗುವುದಿಲ್ಲ’ ಎಂದು ಭಾವಿಸಿ ಡಿಜೆ ಬಳಕೆ ಮಾಡಿದ್ದಾರೆ. ಮಹೇಂದ್ರ ಬುಲೆರೋ ಪಿಕಪ್’ನಲ್ಲಿ ಎಂಟು ಸ್ಪೀಕರ್ ಜೊತೆ ದೊಡ್ಡ ಪ್ರಮಾಣದ ಸದ್ದು ಮಾಡಿ ಸಮಿತಿಯವರು ಸಾರ್ವಜನಿಕರಿಗೆ ಸಮಸ್ಯೆ ಮಾಡಿದ್ದಾರೆ.
ಸೆಪ್ಟೆಂಬರ್ 17ರಂದು ಹೊನ್ನಾವರದ ಆರೋಳ್ಳಿ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನೆ ನಡೆದಿದೆ. ಮೆರವಣಿಗೆಯ ವೇಳೆ ಸಮಿತಿ ಅಧ್ಯಕ್ಷ ನಾರಾಯಣ ದೇವು ಗೌಡ ಅವರು ಡಿಜೆ ಬಳಕೆ ಮಾಡಿಸಿದ್ದಾರೆ. ಆ ದಿನ ಸಂಜೆ 7.30ರಿಂದ 9.45ರವರೆಗೆ ದೊಡ್ಡ ದೊಡ್ಡ ಹಾಡುಗಳನ್ನು ಹಾಕಿ ಸಮಿತಿಯವರು ಮೆರವಣಿಗೆ ಮಾಡಿದ್ದಾರೆ. ಡಿಜೆ ಬಳಕೆ ಮಾಡುವುದಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದ ಸಮಿತಿಯವರು ತಮ್ಮ ಮಾತು ಮೀರಿ ವರ್ತಿಸಿದ್ದಾರೆ.
ಡಿಜೆ ಬಳಕೆ ಮಾಡಿರುವುದನ್ನು ಗಮನಿಸಿದ ತಕ್ಷಣ ಪೊಲೀಸ್ ಸಿಬ್ಬಂದಿ ಸಚಿನ್ ಶ್ರೀನಿವಾಸ ನಾಯ್ಕ ಅವರು ಅದನ್ನು ತಡೆಯುವ ಪ್ರಯತ್ನ ಮಾಡಿದ್ದಾರೆ. `ಧ್ವನಿವರ್ಧಕ ಬಳಕೆಗೆ ಮಾತ್ರ ಅನುಮತಿ ಇದ್ದು, ಡಿಜೆ ಬಳಕೆ ಮಾಡಬೇಡಿ’ ಎಂದು ಅವರು ಸೂಚನೆ ನೀಡಿದ್ದಾರೆ. ಆದರೆ, ಆ ದೊಡ್ಡ ಸದ್ದಿನಲ್ಲಿ ಪೊಲೀಸರ ಮಾತು ಯಾರಿಗೂ ಕೇಳಿಸಿಲ್ಲ. ಮೆರವಣಿಗೆಯ ಉದ್ದಕ್ಕೂ ಡಿಜೆ ಬಳಕೆ ಮಾಡಿದ ಕಾರಣ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಹಾಗೂ ಡಿಜೆ ಮಾಲಕ-ಆಪರೇಟರ್ ವಿರುದ್ಧ ಪೊಲೀಸರು ಕೇಸು ಹಾಕಿದ್ದಾರೆ.