ಯಲ್ಲಾಪುರದಲ್ಲಿ ಗೌಂಡಿ ಕೆಲಸ ಮಾಡಿಕೊಂಡಿದ್ದ ಮೋದಿನ್‌ಸಾಬ್ ಅವರು ಒಂದೇ ದಿನ ಮಟ್ಕಾ ಆಡಿಸಿ 1400ರೂ ದುಡಿದಿದ್ದಾರೆ. ಈ ಆಟ ಕಾನೂನುಬಾಹಿರವಾಗಿದ್ದರಿಂದ ಆ ಹಣವನ್ನು ಪೊಲೀಸರು ಜಪ್ತು ಮಾಡಿ, ಮೋದಿನ್‌ಸಾಬ್ ಅವರ ವಿರುದ್ಧ ಕೇಸು ದಾಖಲಿಸಿದ್ದಾರೆ.
ಯಲ್ಲಾಪುರದ ನೂತನ ನಗರದಲ್ಲಿ ಮೋದಿನ್‌ಸಾಬ್ ಹುಸೇನ್ ಶೇಖ್ ಅವರು ವಾಸವಾಗಿದ್ದಾರೆ. 46ವರ್ಷದ ಅವರು ಕಟ್ಟಡ ಕಾರ್ಮಿಕರಾಗಿದ್ದು, ಗೌಂಡಿ ಕೆಲಸದಲ್ಲಿ ಪರಿಣಿತಿಪಡೆದಿದ್ದಾರೆ. ಇಷ್ಟು ವರ್ಷಗಳ ಕಾಲ ಕಟ್ಟಡ ಕಾರ್ಮಿಕರಾಗಿಯೇ ದುಡಿದ ಅವರು ಸದ್ಯ ಇನ್ನಷ್ಟು ಹಣ ಮಾಡುವ ಉದ್ದೇಶದಿಂದ ಅಡ್ಡದಾರಿ ಹಿಡಿದಿದ್ದಾರೆ. ಅದಕ್ಕಾಗಿ ಅವರು ಮಟ್ಕಾ ಆಡಿಸುವುದಕ್ಕೆ ಮುಂದಾಗಿದ್ದು, 1ರೂಪಾಯಿಗೆ 80 ರೂ ಕೊಡುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡಿದ್ದಾರೆ.
ಜುಲೈ 28ರಂದು ಯಲ್ಲಾಪುರದ ಎಪಿಎಂಸಿ ಬಸ್ ನಿಲ್ದಾಣದ ಬಳಿ ನಿಂತ ಮೋದಿನ್‌ಸಾಬ್ ಅವರು ಅಲ್ಲಿ ಬಂದು-ಹೋಗುವವರನ್ನೆಲ್ಲ ಮಾತನಾಡಿಸಿದ್ದಾರೆ. ಅದೃಷ್ಟದ ಆಟ ಆಡಿಸುವುದಾಗಿ ಜನರನ್ನು ನಂಬಿಸಿ ಹಣಪಡೆದಿದ್ದಾರೆ. ಸಂಜೆ 6.35ಕ್ಕೆ ಈ ವಿಷಯ ಪಿಸೈ ರಾಜಶೇಖರ ವಂದಲಿ ಅವರ ಕಿವಿಗೆ ಬಿದ್ದಿದೆ. ತಕ್ಷಣ ತಮ್ಮ ಸಿಬ್ಬಂದಿ ಜೊತೆ ಅಲ್ಲಿಗೆ ಹೋದ ಅವರು ಮೋದಿನ್‌ಸಾಬ್ ಅವರ ಅಕ್ರಮ ದಂಧೆಗೆ ಅಡ್ಡಗಾಲು ಹಾಕಿದ್ದಾರೆ. ಆ ದಿನ ಮೋದಿನ್‌ಸಾಬ್ ಅವರು ಸಂಗ್ರಹಿಸಿದ್ದ ಹಣವನ್ನು ಜಪ್ತು ಮಾಡಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.