ಕಾರವಾರದಲ್ಲಿ ಮನೆ ಮನೆಗೆ ಎನ್ಯುಮರೇಷನ್ ಫಾರ್ಮ್ ವಿತರಣೆಗೆ ಹೊರಟಿದ್ದ ಕಾರವಾರದ ವಿದ್ಯಾಭಾರತಿ ಪೆರುಲಕರ್ ಅವರಿಗೆ ಜೀವ ಬೆದರಿಕೆ ಬಂದಿದೆ. ಎನ್ಯುಮರೇಷನ್ ಫಾರ್ಮ್ ವಿತರಿಸಲು ಹೋಗಿದ್ದ ಅವರಿಗೆ ಆಳ್ವೇವಾಡದ ಶಿಶಿರ ಪೆಡುಲಕರ್ ಅವರು ಬೆದರಿಸಿದ್ದಾರೆ.
ಕಾರವಾರದ ಖಾಪ್ರಿ ದೇವಾಲಯ ಎದುರು ವಿದ್ಯಾಭಾರತಿ ಸಂದೀಪ ಪೆರುಲಕರ್ ಅವರು ವಾಸವಾಗಿದ್ದಾರೆ. ಅಲ್ಲಿಯೇ ಸಮೀಪದ ಆಳ್ವೇವಾಡದಲ್ಲಿ ಶಿಶಿರ ಗಣಪತಿ ಪೆಡುಲಕರ್ ಅವರು ವಾಸವಾಗಿದ್ದಾರೆ. ವಿದ್ಯಾಭಾರತಿ ಪೆರುಲಕರ್ ಅವರು ತಮ್ಮ ಸ್ನೇಹಿತೆ ಸುನಿತಾ ಗಣೇಶ ಸಾರಂಗ ಹಾಗೂ ಅಂಗನವಾಡಿ ಕಾರ್ಯಕರ್ತೆ ಚಂದ್ರಕಲಾ ಮೆಹ್ತಾ ಅವರ ಜೊತೆ ಸೇರಿ ಮನೆ ಮನೆ ಭೇಟಿ ಮಾಡುತ್ತಿದ್ದಾರೆ. ಎಲ್ಲಾ ಮತದಾರರಿಗೂ ಅವರು ಎನ್ಯುಮರೇಷನ್ ಫಾರ್ಮ್ ಹಂಚಿಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.
ಜುಲೈ 2ರಂದು ಈ ಮೂವರು ಎನ್ಯುಮರೇಷನ್ ಫಾರ್ಮ್ ವಿತರಣೆಗಾಗಿ ಆಳ್ವೇವಾಡಕ್ಕೆ ಹೋಗಿದ್ದಾರೆ. ಶಿಶಿರ ಪೆಡುಲಕರ್ ಅವರ ಮನೆ ಮುಂದೆ ಹಾಯ್ದು ಹೋಗುವಾಗ ಅಲ್ಲಿದ್ದ ಶಿಶಿರ್ ಪೆಡಲಕರ್ ಅವರು ಆ ಮೂವರು ಮಹಿಳೆಯರನ್ನು ಅಡ್ಡಗಟ್ಟಿದ್ದಾರೆ. `ನನ್ನ ಮೇಲೆ ಕೇಸ್ ಹಾಕಿ, ನನ್ನ ಮನೆಗೆ ಬಂದಿದ್ದೀಯಾ? ಎಂದು ಅವರು ವಿದ್ಯಾಭಾರತಿ ಪೆರುಲಕರ್ ಅವರನ್ನು ಪ್ರಶ್ನಿಸಿದ್ದಾರೆ. 2024ರಲ್ಲಿ ವಿದ್ಯಾಭಾರತಿ ಅವರು ಶಿಶಿರ ಪೆಡಲಕರ್ ಅವರ ವಿರುದ್ಧ ಪೊಲೀಸ್ ಪ್ರಕರಣವೊಂದನ್ನು ದಾಖಲಿಸಿದ್ದು, ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಆ ಕೇಸ್ ಹಿಂಪಡೆಯದೇ ಇದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಹೆದರಿಸಿದ್ದಾರೆ.