ಶಾಲೆಗೆ ಹೋಗುವ ಮಕ್ಕಳಿಗೆ ಸರ್ಕಾರ ಉಚಿತ ಬಸ್ ಪಾಸ್ ಕೊಟ್ಟಿದೆ. ಆದರೆ, ಅಗತ್ಯಕ್ಕೆ ಅನುಣವಾಗಿ ಬಸ್ ಮಾತ್ರ ಬಿಡುತ್ತಿಲ್ಲ. ಹೀಗಾಗಿ ಯಲ್ಲಾಪುರ-ಅಂಕೋಲಾ ಮಾರ್ಗದ ವಿದ್ಯಾರ್ಥಿಗಳು ಲಾರಿ-ಟ್ರಕ್ಕುಗಳನ್ನು ಆಶ್ರಯಿಸಿ ಶಾಲೆ ಸೇರುತ್ತಿದ್ದಾರೆ.
ಯಲ್ಲಾಪುರ-ಅಂಕೋಲಾ ಮಾರ್ಗವಾಗಿ ನಿತ್ಯ ಹಲವು ಬಸ್ ಓಡಾಡುತ್ತವೆ. ಆದರೆ, ಅನೇಕ ಬಸ್ಸುಗಳು ಸ್ಥಳೀಯವಾಗಿ ನಿಲುಗಡೆ ಹೊಂದುತ್ತಿಲ್ಲ. ಅದರಿಂದ ವಿದ್ಯಾರ್ಥಿಗಳು ದಿನವೂ ಸಮಸ್ಯೆ ಅನುಭವಿಸುತ್ತಿದ್ದಾರೆ. ಸ್ಥಳೀಯ ಬಸ್ಸುಗಳ ಓಡಾಟವಿಲ್ಲದ ಕಾರಣ ಅವರ ಬಳಿಯಿರುವ ಪಾಸ್ ಪ್ರಯೋಜನಕ್ಕೆ ಬರುತ್ತಿಲ್ಲ. ಶಾಲೆಗೆ ಹೋಗುವುದಕ್ಕಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಕಾಯುವ ಮಕ್ಕಳು ಸಿಕ್ಕ ಸಿಕ್ಕ ವಾಹನಗಳಿಗೆ ಕೈ ಮಾಡುತ್ತಿದ್ದಾರೆ.
ಮಾಸ್ತಿಕಟ್ಟಾ, ಹಬ್ಬುಳ, ಮೂಲೆಮನೆ, ಸಬಗುಳಿ, ಆಲದಕೋಣ, ವಜ್ರಳ್ಳಿ ಸೇರಿದಂತೆ ಹಲವು ಗ್ರಾಮಗಳ ವಿದ್ಯಾರ್ಥಿಗಳು ಪ್ರತಿನಿತ್ಯ ಇದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಂಕೋಲಾ ಮತ್ತು ಯಲ್ಲಾಪುರದ ಶಾಲೆ, ಕಾಲೇಜು ಹಾಗೂ ವಿವಿಧ ತರಬೇತಿ ಕೇಂದ್ರಗಳಿಗೆ ತೆರಳಲು ಸ್ಥಳೀಯ ಬಸ್ ಸೌಕರ್ಯ ಇಲ್ಲದ ಕಾರಣ ಮಕ್ಕಳಿಗೆ ದೊಡ್ಡ ಸಮಸ್ಯೆಯಾಗಿದೆ. ಇಲ್ಲಿನ ಅನೇಕ ವಿದ್ಯಾರ್ಥಿಗಳು ಲಾರಿ, ಟಾಕ್ಸಿ ಹಾಗೂ ಇನ್ನಿತರ ಅಪರಿಚಿತ ವಾಹನ ಅವಲಂಭಿಸಿ ಓಡಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಶಾಲೆ ತಲುಪಲು ತೊಂದರೆ ಅನುಭವಿಸುತ್ತಿದ್ದಾರೆ.
ಅಂಕೋಲಾ – ಯಲ್ಲಾಪುರ ಮಾರ್ಗದಲ್ಲಿ ವಿದ್ಯಾರ್ಥಿಗಳಷ್ಟೇ ಅಲ್ಲದೆ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಾರೆ. ಆದರೂ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಅಂಕೋಲಾದಿAದ ಯಲ್ಲಾಪುರ ಮಾರ್ಗದಲ್ಲಿ ಒಂದೇ ಒಂದು ಸ್ಥಳೀಯ ಬಸ್ ಬಿಡುತ್ತಿಲ್ಲ. ಎಲ್ಲಾ ಹಳ್ಳಿಗಳ ಓಡಾಟಕ್ಕೂ ಸ್ಥಳೀಯ ಬಸ್ ವ್ಯವಸ್ಥೆ ಇದ್ದರೂ ಹೆದ್ದಾರಿ ಮಾರ್ಗವಾಗಿ ಸೂಕ್ತ ಬಸ್ ಬಿಡದಿರುವುದು ಅಸಮಧಾನಕ್ಕೆ ಕಾರಣವಾಗಿದೆ.