ಶಾಲೆಗೆ ಹೋಗುವ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪಿಗೆ ಯಲ್ಲಾಪುರ ನ್ಯಾಯಾಲಯ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಉಮ್ಮಚ್ಗಿಯ ಸಂತೋಷ ಸಿದ್ದಿ ಅವರ ಕ್ರೂರನಡೆಯನ್ನು ಖಂಡಿಸಿದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು ಕಠಿಣ ಆದೇಶ ಹೊರಡಿಸಿದ್ದಾರೆ.
2022ರಲ್ಲಿ ಉಮ್ಮಚ್ಗಿಯ ಸಂತೋಷ ಪೆದ್ರು ಸಿದ್ದಿ (ಮಂಡವಾಳಕರ್) ಅವರು ಬಾಲಕಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡಿದ್ದರು. 27 ವರ್ಷದ ಅವರು ಶಾಲೆಗೆ ಹೊಗುವ ಹೆಣ್ಣು ಮಗಳ ಮೇಲೆ ದೌರ್ಜನ್ಯ ಎಸಗಿದ್ದರು. ಸಮಸ್ಯೆಗೆ ಸಿಲುಕಿದ ಸಂತ್ರಸ್ತ ಬಾಲಕಿ ನಡವಳಿಕೆಯಲ್ಲಿ ಬದಲಾವಣೆಯಾಗಿದ್ದು, ಆಪ್ತ ಸಮಾಲೋಚನೆ ನಡೆಸಿದಾಗ ಈ ವಿಷಯ ಹೊರಬಂದಿತ್ತು.
ಆ ವೇಳೆ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿ ಸಂತೋಷ ಸಿದ್ದಿ ಅವರನ್ನು ಬಂಧಿಸಿದ್ದರು. ಆಗಿನ ಪಿಐ ಸುರೇಶ ಯಳ್ಳೂರು ತನಿಖೆ ನಡೆಸಿ, ದೋಷಾರೋಪಣ ಪಟ್ಟಿ ಸಿದ್ಧಪಡಿಸಿದ್ದರು. ಎಸೈ ಮಂಜುನಾಥ ಮನ್ನಂಗಿ ಅವರ ಸಹಕಾರದಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿತ್ತು. ಪಿಸೈ ರಾಜಶೇಖರ ವಂದಲಿ ಅವರು ಕೋರ್ಟ ಮಾನಟರಿಂಗ್ ಕೆಲಸ ನಿರ್ವಹಿಸಿದರು.
ವಿಶೇಷ ಸರ್ಕಾರಿ ಅಭಿಯೋಜಕ ಗುರುಶಾಂತಯ್ಯ ಕುರ್ಡಿಕೇರಿ ವಾದ ಮಂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿದರು. ಆರೋಪಿ ಸಂತೋಷ ಸಿದ್ದಿ ಬಾಲಕಿ ಮುಂದೆ ನಡೆದುಕೊಂಡ ಅಮಾನವೀಯ ಕೃತ್ಯದ ಬಗ್ಗೆ ಅವರು ವಿವರಿಸಿ ವಾದ ಮಂಡಿಸಿದರು. ಪೊಲೀಸ್ ಸಿಬ್ಬಂದಿ ಗಜಾನನ ನಾಯ್ಕ ಹಾಗೂ ವೀರೇಶ್ ಎಂ ಎಚ್ ಅವರು ಪ್ರಕರಣದ ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಸಮಗ್ರ ವಾದ ಆಲಿಸಿದ ನ್ಯಾಯಾಧೀಶೆ ಪ್ರತಿಭಾ ಕುಲಕರ್ಣಿ ಅವರು ಅತ್ಯಾಚಾರ ಆರೋಪಿ ಸಂತೋಷ ಸಿದ್ದಿಗೆ ಕಠಿಣ ಶಿಕ್ಷೆ ಪ್ರಕಟಿಸಿದರು. 20 ವರ್ಷ ಜೈಲು ಶಿಕ್ಷೆಯ ಜೊತೆ 1 ಲಕ್ಷ ರೂ ದಂಡ ಪಾವತಿಸುವಂತೆ ಅವರು ಆದೇಶಿಸಿದರು. ಸಂತ್ರಸ್ತ ಬಾಲಕಿಗೆ ಕಾನೂನು ಸೇವಾ ಪ್ರಾಧಿಕಾರದವರು 4 ಲಕ್ಷ ರೂ ನೆರವು ನೀಡುವಂತೆ ಸೂಚಿಸಿದರು.