ವಿದ್ಯುತ್ ಹಂಚಿಕೆ ಹಾಗೂ ನಿರ್ವಹಣೆಯನ್ನುವಹಿಸಿಕೊಳ್ಳುವುದಾಗಿ ಟಾಟಾ ಪವರ್ ಕಂಪನಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು, ಭಾರೀ ವಿರೋದದ ನಂತರ ಆ ಅರ್ಜಿಯನ್ನು ಕಂಪನಿ ಹಿಂಪಡೆದಿದೆ.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಮುಂದೆ ಟಾಟಾ ಪವರ್ ಕಂಪನಿ ಸಲ್ಲಿಸಿದ್ದ ರಾಜ್ಯದ 19 ಕಂದಾಯ ಜಿಲ್ಲೆಗಳಿಗೆ ಸಂಬAಧಿಸಿದ ‘ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ’ ಅರ್ಜಿಯನ್ನು ಶುಕ್ರವಾರ ಹಿಂಪಡೆದಿದೆ. ಈ ಬೆಳವಣಿಗೆಯನ್ನು ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕೆಇಬಿ ಎಂಜಿನಿಯರ್ಸ್ ಅಸೋಸಿಯೇಷನ್ ಹಾಗೂ ವಿವಿಧ ಕಾರ್ಮಿಕ ಮತ್ತು ಜನಪರ ಸಂಘಟನೆಗಳು ಸ್ವಾಗತಿಸಿವೆ.
ಟಾಟಾ ಪವರ್ ಕಂಪನಿಯ ಪ್ರತಿನಿಧಿಯು, ಕರ್ನಾಟಕದ ಎಲ್ಲಾ 19 ಕಂದಾಯ ಜಿಲ್ಲೆಗಳಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯುವ ಮನವಿ ಸಲ್ಲಿಸಿದರು. ವಿಚಾರಣೆ ವೇಳೆ ಅರ್ಜಿಯಲ್ಲಿ ಕೆಲವು ಲೋಪಗಳು ಇರುವುದನ್ನು ಕೆಇಆರ್‌ಸಿ ಅಧ್ಯಕ್ಷರು ಗಮನಿಸಿದ್ದು, ಬಳಿಕ ಅರ್ಜಿ ಹಿಂಪಡೆಯಲು ಸಲ್ಲಿಸಿದ್ದ ಮನವಿಯನ್ನು ಅಂಗೀಕರಿಸಿದ್ದಾರೆ. ಟಾಟಾ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿ ನೀಡದಂತೆ ಒತ್ತಾಯಿಸಿ ರೈತ ಮತ್ತು ಜನಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಸಿಪಿಐ(ಎಂ) ನೇತೃತ್ವದಲ್ಲಿ ಎಡ ಪಕ್ಷಗಳು ಬೆಂಗಳೂರಿನಲ್ಲಿ ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ಮಟ್ಟದ ಸಮಾವೇಶ ನಡೆಸಿದ್ದವು. ರಾಜ್ಯದ ಎಲ್ಲ ಜನರು ಆಕ್ಷೇಪಣೆ ಸಲ್ಲಿಸುವಂತೆ ಸಮಾವೇಶ ಮನವಿ ಮಾಡಿತ್ತು. ಸಾವಾರಾರು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು.
ಈ ಬಗ್ಗೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಪ್ರತಿಕ್ರಿಯಿಸಿ `ಟಾಟಾ ಪವರ್ ಅರ್ಜಿ ಹಿಂಪಡೆಯಲು ರಾಜ್ಯಾದ್ಯಂತ ನಡೆದ ನಿರಂತರ ಹೋರಾಟ, ಸಾರ್ವಜನಿಕ ಪ್ರತಿರೋಧ ಹಾಗೂ ವಿವಿಧ ಸಂಘಟನೆಗಳ ಒಗ್ಗಟ್ಟಿನ ಪ್ರಯತ್ನವೇ ಕಾರಣ’ ಎಂದು ಹೇಳಿದ್ದಾರೆ.