ದಶಲಕ್ಷ ಗಿಡ ನೆಡುವ ಅಭಿಯಾನ ನಡೆಸುತ್ತಿರುವ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಈ ದಿನ ಕುಮಟಾಗೆ ಹೋಗಿದ್ದು, ಅಲ್ಲಿನ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಸಪ್ತಪದಿ ತುಳಿದ ನವ ದಂಪತಿಗೆ ಅವರು ಹಲಸಿನ ಗಿಡವನ್ನು ಉಡುಗರೆಯಾಗಿ ನೀಡಿದ್ದಾರೆ.
ಕುಮಟಾದ ಬರ್ಗಿಯಲ್ಲಿ ಭಾನುವಾರ ದಿನೇಶ ಹರಿಕಂತ್ರ ಹಾಗೂ ಅಕ್ಷತಾ ಹರಿಕಂತ್ರ ಅವರ ಮದುವೆ ನಡೆದಿದೆ. ದಿನೇಶ ಹರಿಕಂತ್ರ ಅವರ ತಾಯಿ ಸೀತಾ ಹರಿಕಂತ್ರ ಹಾಗೂ ಅಕ್ಷತಾ ಹರಿಕಂತ್ರ ಅವರ ತಂದೆ ರಾಮಚಂದ್ರ ಹರಿಕಂತ್ರ ಅವರು ಅರಣ್ಯವಾಸಿಗಳಾಗಿದ್ದು, ರವೀಂದ್ರ ನಾಯ್ಕ ಅವರು ನಡೆಸುವ ಹೋರಾಟದಲ್ಲಿ ಸಕ್ರೀಯರಾಗಿದ್ದಾರೆ. ಈ ಹಿನ್ನಲೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯವರು ಈ ಮದುವೆಯಲ್ಲಿ ಭಾಗವಹಿಸಿದ್ದು, ಮದುವೆ ಮನೆಯಲ್ಲಿಯೂ ಅವರು ತಮ್ಮ ಅಭಿಯಾನದ ಕಾರ್ಯ ಮುಂದುವರೆಸಿದ್ದಾರೆ.
ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ನಾಗೂರು, ಸಂಚಾಲಕ ರಾಜೀವ ಎಮ್ ಗೌಡ ಕತಗಾಲ, ಸುನೀಲಾ ಇತರರು ನವ ದಂಪತಿಗೆ ಗಿಡ ಕೊಟ್ಟು ಶುಭ ಹಾರೈಸಿದ್ದಾರೆ. ಅದಾದ ನಂತರ ಅಲ್ಲಿಯೇ ಅವರು ಸಭೆ ನಡೆಸಿ, ಮುಂದಿನ ಅಭಿಯಾನ ಹಾಗೂ ಹೋರಾಟದ ಚರ್ಚೆ ಮಾಡಿದ್ದಾರೆ.