ಉತ್ತರ ಕನ್ನಡ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ನಡೆಯುವ ಹೆರಿಗೆಗಳ ಪೈಕಿ ಶೇ 44ರಷ್ಟು ಸಿಜರಿಯನ್ ಮೂಲಕ ಆಗುತ್ತಿದೆ. ಏಪ್ರಿಲ್’ನಿಂದ ಜುಲೈ ಅವಧಿಯಲ್ಲಿ ಜಿಲ್ಲೆಯಲ್ಲಿ ಒಟ್ಟು 5053 ಹೆರಿಗೆ ನಡೆದಿದ್ದು, ಅದರಲ್ಲಿ 2211 ಹೆರಿಗೆಗಳು ಸಿ-ಸೆಕ್ಷನ್’ಗೆ ಸೇರಿವೆ.
Advertisement. Scroll to continue reading.
ಈ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. `ಈ ಅವಧಿಯಲ್ಲಿ ಯಾವುದೇ ತಾಯಿ ಮರಣ ಸಂಭವಿಸಿಲ್ಲ’ ಎಂದು ಸಹ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. `ಗರ್ಭಧಾರಣೆ ದೃಢಪಟ್ಟ ನಂತರ ಕಡ್ಡಾಯವಾಗಿ ತಾಯಿ ಕಾರ್ಡ ವಿತರಿಸಬೇಕು. ಮಗು ಜನಿಸುವ ವರೆಗೆ ತಾಯಿ ಮತ್ತು ಮಗುವಿನ ಆರೋಗ್ಯದ ಬಗ್ಗೆ ನಿರಂತರವಾಗಿ ನಿಗಾವಹಿಸಬೇಕು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಸೂಚನೆ ನೀಡಿದ್ದಾರೆ.
Advertisement. Scroll to continue reading.
`ಗರ್ಭಿಣಿಯರನ್ನು ತಾಯಿ ಕಾರ್ಡ್ಗೆ ನೋಂದಣಿ ಮಾಡಿದ ಬಳಿಕ ಅವರಿಗೆ ವಿವಿಧ ಇಲಾಖೆಗಳ ಮೂಲಕ ಸರ್ಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ನಿರಂತರ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ನೀಡಬೇಕು. ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆಗೊಳಪಡುವ ಗರ್ಭಿಣಿಯರ ಮಾಹಿತಿ ಪಡೆದು ಅವರಿಗೆ ಕೂಡಾ ತಾಯಿ ಕಾರ್ಡ್ ನೀಡಿ, ಸರಕಾರದ ಸೌಲಭ್ಯಗಳನ್ನು ಒದಗಿಸಬೇಕು. ಸಕಾಲದಲ್ಲಿ ಅಗತ್ಯವಿರುವ ಲಸಿಕೆಗಳು ಮತ್ತು ಔಷಧಗಳನ್ನು ಉಚಿತವಾಗಿ ವಿತರಿಸಬೇಕು’ ಎಂದು ಡೀಸಿ ಸೂಚಿಸಿದ್ದಾರೆ. `ಆಸ್ಪತ್ರೆಗಳಲ್ಲಿನ ಔಷಧಗಳ ದಾಸ್ತಾನು ನಿರಂತರವಾಗಿ ಪರಿಶೀಲನೆ ನಡೆಸಬೇಕು. ಯಾವುದೇ ಔಷಧದ ಕೊರತೆಯಾಗದಂತೆ ಗರಿಷ್ಠ ಮುನ್ನೆಚ್ಚರಿಕೆವಹಿಸಬೇಕು’ ಎಂದು ನಿರ್ದೇಶನ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಮಾತನಾಡಿ `ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ದಾಖಲಾಗುವ ರೋಗಿಯು ಸಂಪೂರ್ಣ ಗುಣಮುಖರಾಗುವವರೆಗೆ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಾರದು. ರೋಗಿಯ ಆರೋಗ್ಯದಲ್ಲಿ ಸಂಪೂರ್ಣ ಸುಧಾರಣೆ ಕಂಡು ಬಂದ ನಂತರ ಡಿಸ್ಚಾರ್ಜ್ ಮಾಡಬೇಕು. ನವಜಾತ ಶಿಶುಗಳ ಆರೋಗ್ಯದ ಬಗ್ಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ಕಾಳಜಿವಹಿಸಬೇಕು. ತಾಯಂದಿರಿಗೆ ನವಜಾತ ಶಿಶುವಿನ ಪಾಲನೆ ಪೋಷಣೆ ಕುರಿತಂತೆ ಅವರಿಗೆ ಸಂಪೂರ್ಣವಾಗಿ ಅರ್ಥವಾಗುವ ಭಾಷೆಯಲ್ಲಿಯೇ ಸುರಕ್ಷಿತ ಪಾಲನಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಹಾವು ಕಡಿತ ಮತ್ತು ನಾಯಿ ಕಡಿತದ ಔಷಧಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು’ ಎಂದು ಹೇಳಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಸಂಜಯ ದೊಡ್ಡಮನಿ, ಆರ್.ಸಿ.ಎಚ್ ಅಧಿಕಾರಿ ಡಾ.ನಟರಾಜ್, ಕಾರ್ಯಕ್ರಮ ಅಧಿಕಾರಿಗಳಾದ ಡಾ ಶಂಕರ್ ರಾವ್, ಕ್ಯಾ ಡಾ ರಮೇಶ್ ರಾವ್, ಡಾ ಅಶ್ವಿನಿ ಬೋರ್ಕರ್, ಡಾ ಪ್ರಸನ್ನ, ಕ್ರಿಮ್ಸ್ ನ ವೈದ್ಯ ಡಾ ಹೇಮಗಿರಿ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ತಾಲೂಕು ವೈದ್ಯಾಧಿಕಾರಿಗಳು ವರ್ಚವಲ್ ಮೂಲಕ ಈ ಸಭೆಯಲ್ಲಿ ಭಾಗವಹಿಸಿದ್ದರು.