ಯಶೋಧರ ನಾಯ್ಕ ಕೋ ಆಪರೇಟಿವ್ ಸೊಸೈಟಿಯ ಬೀಗ ಮುರಿದು ಕಳ್ಳತನ ಮಾಡಿದ್ದ ಆರೋಪಿಗೆ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ ಏಳು ಸಾವಿರ ರೂ ದಂಡ ಪಾವತಿಗೂ ಆದೇಶಿಸಿದೆ.
Advertisement. Scroll to continue reading.
ದಾಂಡೇಲಿ ಸುಭಾಸನಗರ ಮಜಫರ್ ಮಹಮದ್ ಸಾಬ್ ಅವರು ಕುಮಟಾ ಬಸ್ ನಿಲ್ದಾಣದ ಬಳಿಯಿದ್ದ ಯಶೋಧರ ನಾಯ್ಕ ಕೋ ಆಪರೇಟಿವ್ ಸೊಸೈಟಿಯ ಬೀಗ ಮುರಿದಿದ್ದರು. 2020ರ ಡಿಸೆಂಬರ್ 17ರಂದು ಅವರು ಈ ಕಳ್ಳತನ ಮಾಡಿದ್ದು, ಸೊಸೈಟಿ ಒಳಗೆ ನುಗ್ಗಿ ಸಿಸಿ ಕ್ಯಾಮರಾವನ್ನು ಹಾಳು ಮಾಡಿದ್ದರು. ಅದಾದ ನಂತರ ಅಲ್ಲಿದ್ದ 156994ರೂ ಹಣ ಕಳ್ಳತನ ಮಾಡಿ ಪರಾರಿಯಾಗಿದ್ದರು. ಪರಾರಿಯಾಗುವ ಮುನ್ನ ಸಿಸಿ ಕ್ಯಾಮರಾದ ಡಿವಿಆರ್ ಕದ್ದೊಯ್ದ ಮಜಫರ್ ಸಾಬ್ ಅವರು ಅದನ್ನು ಅಘನಾಶಿನಿ ಹೊಳೆಯಲ್ಲಿ ತೇಲಿ ಬಿಟ್ಟಿದ್ದರು.
Advertisement. Scroll to continue reading.
ಕಳ್ಳತನದ ಪ್ರಕರಣ ದಾಖಲಿಸಿಕೊಂಡ ಕುಮಟಾ ಪೊಲೀಸರು ತನಿಖೆ ಶುರು ಮಾಡಿದ್ದರು. ನಸುಕಿನ 3.15ರ ಅವಧಿಯಲ್ಲಿ ಈ ಕಳ್ಳತನ ನಡೆದಿದ್ದು, ಕುಮಟಾ ಹೊಸ ಬಸ್ ನಿಲ್ದಾಣ ಬಳಿಯಿರುವ ಯಶೋಧರ ನಾಯ್ಕ ಕೋ ಆಪರೇಟಿವ್ ಬ್ಯಾಂಕಿನ ಸುತ್ತಲಿನ ಸಿಸಿ ಕ್ಯಾಮರಾಗಳ ದಾಖಲೆ ಹುಡುಕಿದ್ದರು. ಪಿಸೈ ರವಿ ಗುಡ್ಡಿ ಅವರು ಪ್ರಕರಣದ ಭಾಗಶಃ ತನಿಖೆ ನಡೆಸಿ ವರ್ಗವಾಗಿದ್ದು, ಅದಾದ ನಂತರ ಆಗಮಿಸಿದ ಪರಮೇಶ್ವರ ಗುನಗಾ ಅವರು ವಿವಿಧ ಸಾಕ್ಷಿ ಸಂಗ್ರಹ ಮಾಡಿದ್ದರು. ನಂತರ ಪ್ರಕಾಶ ಆರ್ ನಾಯ್ಕ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು.
ಸರ್ಕಾರಿ ಅಭಿಯೋಜಕ ಗಿರೀಶ ನಾಗಪ್ಪ ಪಟಗಾರ ಅವರು ವಾದ ಮಂಡಿಸಿ ಕಳ್ಳತನದ ದಾಖಲೆಗಳನ್ನು ಹಾಜರು ಮಾಡಿದ್ದರು. ನ್ಯಾಯಾಧೀಶೆ ವರ್ಷ ಶ್ರೀ ಅವರು ಈ ಪ್ರಕರಣ ವಿಚಾರಣೆ ನಡೆಸಿ ಆರೋಪಿ ಮಜಫರ್ ಮಹಮದ್ ಸಾಬ್ ಮೇಲಿನ ಆರೋಪ ಸಾಭೀತಾದ ಬಗ್ಗೆ ನಿರ್ಣಯ ನೀಡಿದರು. ಮಜಫರ್ ಮಹಮದ್ ಸಾಬ್ ಅವರೇ ಕಳ್ಳತನ ಮಾಡಿದ್ದು ಸಾಭೀತಾದ ಕಾರಣ ಎರಡು ವರ್ಷ ಸಾದಾ ಜೈಲು ಹಾಗೂ 7 ಸಾವಿರ ರೂ ದಂಡಕ್ಕೆ ಆದೇಶಿಸಿದರು. ದಂಡ ಪಾವತಿಗೆ ವಿಫಲ ಆದರೆ ಹೆಚ್ಚುವರಿ ಶಿಕ್ಷೆ ನೀಡುವ ಬಗ್ಗೆಯೂ ಅವರು ಆದೇಶದಲ್ಲಿ ಪ್ರಕಟಿಸಿದರು.