ಅಂಕೋಲಾದಲ್ಲಿನ ಖಾಲಿ ಭೂಮಿಗಳ ಮೇಲೆ ಕಿಡಿಗೇಡಿಗಳು ಕಣ್ಣಿಟ್ಟಿದ್ದು, ನಕಲಿ ದಾಖಲೆಗಳನ್ನು ಸೃಷ್ಠಿಸಿ ಆ ಭೂಮಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ತಿಂಗಳ ಹಿಂದೆ ಸತ್ತವರ ಹೆಸರಿನಲ್ಲಿದ್ದ ಭೂಮಿಯನ್ನು ನಕಲಿ ದಾಖಲೆ ಜೊತೆ ಮಾರಾಟ ಮಾಡಿದ್ದು, ಇದೀಗ ಅಂಥಹುದೇ ಮತ್ತೊಂದು ಪ್ರಕರಣ ಹೊರ ಬಿದ್ದಿದೆ.
Advertisement. Scroll to continue reading.
ಅಂಕೋಲಾ ಶೇಡಿಕೇರಿಯ ಇಮ್ತಾಯಜ್ ಸಯ್ಯದ್ ಹಾಗೂ ಅವರ ಸಹೋದರ ಯಾಕೂಬ್ ಸಯ್ಯದ್ ಅವರ ಹೆಸರಿನಲ್ಲಿದ್ದ 1.14 ಎಕರೆ ಭೂಮಿ ದಿಢೀರ್ ಆಗಿ ಕುಮಟಾ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಅವರ ಹೆಸರಿಗೆ ಬಂದಿದೆ. ದಾಖಲೆಗಳನ್ನು ಪರಿಶೀಲನೆ ಮಾಡಿದಾಗ ಗದಗದ ಹುಬ್ಬಳ್ಳಿ ರಸ್ತೆಯ ಈರಣ್ಣ ನೀಲಪ್ಪ ಶಿರಿಯಣ್ಣನವರ್ ಅವರು ಆ 1.14 ಎಕರೆ ಭೂಮಿ ತಮ್ಮದು ಎಂದು ನಕಲಿ ದಾಖಲೆ ಸೃಷ್ಠಿಸಿ ಅದನ್ನು ಮಾರಾಟ ಮಾಡಿದ್ದಾರೆ. ಈ ಮಾರಾಟಕ್ಕೂ ಐದು ತಿಂಗಳ ಮೊದಲು ಆ ಭೂಮಿಯನ್ನು ಈರಣ್ಣ ಶಿರಿಯಣ್ಣನವರ್ ಅವರು ಸಹ ಖರೀದಿಸಿದವರಾಗಿದ್ದು, ಆಗ ಈರಣ್ಣ ಅವರಿಗೆ ಇಮ್ತಾಯಜ್ ಸಯ್ಯದ್ ಹಾಗೂ ಯಾಕೂಬ್ ಸಯ್ಯದ್ ಅವರ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ ಸೃಷ್ಠಿಸಿ, ನಕಲಿ ವ್ಯಕ್ತಿಗಳ ಮೂಲಕ ಆ ಭೂಮಿ ಮಾರಾಟ ನಡೆದಿರುವುದು ಬೆಳಕಿಗೆ ಬಂದಿದೆ. ಒಟ್ಟಾರೆಯಾಗಿ ಈ ಭೂ ಹಗರಣದಲ್ಲಿ ಗದಗದ ಹುಬ್ಬಳ್ಳಿ ರಸ್ತೆಯ ಈರಣ್ಣ ನೀಲಪ್ಪ ಶಿರಿಯಣ್ಣನವರ್, ಕುಮಟಾ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಅವರ ಜೊತೆ ಅಂಕೋಲಾ ಅಂಬಾರಕೊಡ್ಲದ ಮಾರುತಿ ಶಿವಯ್ಯ ಗೌಡ, ಅಂಬಾರಕೊಡ್ಲದ ಸಂತೋಷ ಬುದ್ದು ಗೌಡ, ಪ್ರೀತಿ ದೇವಿದಾಸ ಗುನಗಾ, ಅಂಕೋಲಾದ ಮಹೇಶ ನಾಗಪ್ಪ ಗೌಡ, ಕುಮಟಾ ಮೂರುಕಟ್ಟೆಯ ಮಹಾಬಲೇಶ್ವರ ಗಿರಿಯಾ ನಾಯಕ, ಅಂಕೋಲಾದ ವಿನೋದ ಅಶೋಕ ನಾಯಕ, ಅಂಕೋಲಾದ ಅಮಿತ ಡಿ ನಾಯಕ ಹಾಗೂ ಇನ್ನಿತರರು ಭಾಗಿಯಾದ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.
Advertisement. Scroll to continue reading.
ಬೋಗ್ರಿಬೈಲು ಗ್ರಾಮದ ಸರ್ವೇ ನಂ 79ಅ4 1.14 ಎಕರೆ ಭೂಮಿ ಮೊದಲು ಪಕ್ರುದ್ಧೀನ್ ಸಯ್ಯದ್ ಅವರ ಹೆಸರಿನಲ್ಲಿತ್ತು. ಪಕ್ರಿದ್ಧೀನ್ ಸಯ್ಯದ್ ಅವರು ಆ ಭೂಮಿಯನ್ನು 2019ರಲ್ಲಿ ತಮ್ಮ ಮಕ್ಕಳ ಹೆಸರಿಗೆ ದಾನಪತ್ರದ ಮೂಲಕ ವರ್ಗಾಯಿಸಿದ್ದರು. ಶೇಡಿಕೇರಿಯ ಇಮ್ತಾಯಜ್ ಸಯ್ಯದ್ ಅವರು ಕೃಷಿ ಜೊತೆ ವ್ಯವಹಾರವನ್ನು ಮಾಡಿಕೊಂಡಿದ್ದು ಆ ಭೂಮಿ ಸರ್ವೇ ಮಾಡಿಸಿ ಕಪೌಂಡ್ ಹಾಕಲು ನಿರ್ಧರಿಸಿದ್ದರು. ಅದಕ್ಕಾಗಿ ಅರ್ಜಿ ಕೊಡಲು ಹೋದಾಗ ಪಹಣಿ ತೆಗೆಸಿದ್ದರು. ಆಗ, ಅಲ್ಲಿ ದೇವಿದಾಸ ಗುನಗಾ ಅವರ ಹೆಸರು ಕಂಡು ಕಂಗಾಲಾದರು. ಮ್ಯೂಟೇಶನ್ ದಾಖಲೆ ಪರಿಶಿಲನೆ ಮಾಡಿದಾಗ 2026ರ ಫೆಬ್ರವರಿ 13ರಂದು ನಕಲಿ ಮಾರಾಟ ಪತ್ರ ಸಿದ್ಧಪಡಿಸಿ, ಅದೇ ತಿಂಗಳ 16ರಂದು ಈರಣ್ಣ ನೀಲಪ್ಪ ಶಿರಿಯಣ್ಣನವರ್ ಎಂಬಾತರು ಆ ಭೂಮಿ ಖರೀದಿಸಿರುವುದು ಗೊತ್ತಾಯಿತು. ಆದರೆ, ಆ ಈರಣ್ಣ ಯಾರು? ಎಂದೇ ಇಮ್ತಾಯಜ್ ಅವರಿಗೆ ಗೊತ್ತಿರಲಿಲ್ಲ. ಕ್ರಯಪತ್ರದಲ್ಲಿ ನಮೂದಿಸಿದಂತೆ ಅವರು ನೀಡಿದ 12.50 ಲಕ್ಷ ರೂ ಹಣವೂ ಇಮ್ತಿಯಾಜ್ ಅವರಿಗೆ ಸಿಕ್ಕಿರಲಿಲ್ಲ. ಈರಣ್ಣ ಅವರು ಇಮ್ತಿಯಾಜ್ ಹಾಗೂ ಯಾಕೂಬ್ ಅವರ ಆಧಾರ್ ಕಾರ್ಡ ಡುಪ್ಲಿಕೇಟ್ ಮಾಡಿ, ಅವರ ಬದಲು ಬೇರೆ ವ್ಯಕ್ತಿಗಳನ್ನು ಕೂರಿಸಿ ದಸ್ತಾವೇಜು ನೋಂದಣಿ ಮಾಡಿರುವುದು ಗೊತ್ತಾಯಿತು. ಇದಕ್ಕೆ ಮಹಾಬಲೇಶ್ವರ ಗಿರಿಯಾ ನಾಯಕ, ಮಾರುತಿ ಶಿವಯ್ಯ ಗೌಡ ಎಂಬಾತರ ಸಾಕ್ಷಿ ಹಾಕಿದ್ದು, ಸ್ಥಳೀಯರು ಸಹ ಈ ಹಗರಣದಲ್ಲಿ ಭಾಗಿಯಾಗಿದ್ದು ಗಮನಕ್ಕೆ ಬಂದಿತು.
ಅದಾದ ನಂತರ 2026ರ ಏಪ್ರಿಲ್ 7ರಂದು ಆ ಭೂಮಿಯನ್ನು ದೇವಿದಾಸ ಗುನಗಾ ಅವರು ಈರಣ್ಣ ಅವರಿಂದ ಖರೀದಿ ಮಾಡಿದ ಬಗ್ಗೆ ದಾಖಲೆ ಸಿಕ್ಕಿತು. ಈ ವೇಳೆ ಪ್ರೀತಿ ದೇವಿದಾಸ ಗುನಗಾ ಹಾಗೂ ಮಹೇಶ ನಾಗಪ್ಪ ಗೌಡ ಅವರು ಅದಕ್ಕೆ ಸಾಕ್ಷಿ ಹಾಕಿದ್ದರು. ಭೂ ಹಗರಣದಲ್ಲಿ ಗದಗದ ಹುಬ್ಬಳ್ಳಿ ರಸ್ತೆಯ ಈರಣ್ಣ ನೀಲಪ್ಪ ಶಿರಿಯಣ್ಣನವರ್, ಕುಮಟಾ ನಾಡುಮಾಸ್ಕೇರಿಯ ದೇವಿದಾಸ ನಾಗೇಶ ಗುನಗಾ ಅವರ ಜೊತೆ ಅಂಕೋಲಾ ಅಂಬಾರಕೊಡ್ಲದ ಮಾರುತಿ ಶಿವಯ್ಯ ಗೌಡ, ಅಂಬಾರಕೊಡ್ಲದ ಸಂತೋಷ ಬುದ್ದು ಗೌಡ, ಪ್ರೀತಿ ದೇವಿದಾಸ ಗುನಗಾ, ಅಂಕೋಲಾದ ಮಹೇಶ ನಾಗಪ್ಪ ಗೌಡ, ಕುಮಟಾ ಮೂರುಕಟ್ಟೆಯ ಮಹಾಬಲೇಶ್ವರ ಗಿರಿಯಾ ನಾಯಕ, ಅಂಕೋಲಾದ ವಿನೋದ ಅಶೋಕ ನಾಯಕ, ಅಂಕೋಲಾದ ಅಮಿತ ಡಿ ನಾಯಕ ಅವರ ಹೆಸರು ನೀಡಿ ಇಮ್ತಾಯಜ್ ಸಯ್ಯದ್ ಅವರು ಪೊಲೀಸ್ ದೂರು ದಾಖಲಿಸಿದರು. ಸದ್ಯ ಈ ಹಗರಣದ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.