ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಲಾರಿಗಳು ಒಂದಕ್ಕೆ ಒಂದು ತಾಗಿಕೊಂಡಿದ್ದು, ಅದೇ ವಿಷಯದ ದೊಡ್ಡದಾಗಿ ಲಾರಿ ಚಾಲಕರ ನಡುವೆ ಹೊಡೆದಾಟ ನಡೆದಿದೆ. ಹೆದ್ದಾರಿ ಮೇಲೆ ದಿಢೀರ್ ಆಗಿ ಹೊಡೆದಾಟ ಶುರುವಾಗಿರುವುದನ್ನು ನೋಡಿದ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಭಾರೀ ಪ್ರಮಾಣದ ಸರಕು ಸಾಮಗ್ರಿ ಸಾಗಿಸುತ್ತಿದ್ದ ಲಾರಿಗಳೆರಡು ಶುಕ್ರವಾರ ಅಂಕೋಲಾ ಪ್ರವೇಶಿಸಿದ್ದವು. ಆ ಲಾರಿಗಳು ಒಂದಕ್ಕೊAದು ತಾಗಿದ್ದರಿಂದ ಎರಡು ಲಾರಿ ಚಾಲಕರು ಸಿಟ್ಟಿಗೆದ್ದು ಹೊಡೆದಾಟ ಶುರು ಮಾಡಿದರು. ಮೊದಲು ಮಾತಿನ ಚಕಮಕಿ ನಡೆದಿದ್ದು, ಅಶ್ಲೀಲ ಪದ ಬಳಕೆಯಾದ ಕಾರಣ ಅದು ಹೊಡೆದಾಟದ ಸ್ವರೂಪಪಡೆಯಿತು. ಮಾತಿನಲ್ಲಿಯೇ ಬಗೆಹರಿಸಿಕೊಳ್ಳಬೇಕಾದ ವಿಷಯ ದೊಡ್ಡದಾಗಿ ರಕ್ತ ಸುರಿಯುವಷ್ಟರ ಮಟ್ಟಿಗೆ ಹೋಯಿತು. ಎರಡು ಲಾರಿ ಚಾಲಕರು ಪರಸ್ಪರ ನಡುರಸ್ತೆಯಲ್ಲಿಯೇ ಕಾಳಗ ನಡೆಸಿದರು.
ರಸ್ತೆ ಮದ್ಯೆ ಲಾರಿ ನಿಲ್ಲಿಸಿ ಚಾಲಕರು ಹೊಡೆದಾಟ ನಡೆಸಿದ್ದರಿಂದ ಉಳಿದ ವಾಹನಗಳ ಓಡಾಟಕ್ಕೆ ಸಮಸ್ಯೆಯಾಯಿತು. ಕೆಲವರು ಬುದ್ದಿ ಹೇಳುವ ಪ್ರಯತ್ನ ಮಾಡಿದರೂ ಆ ಲಾರಿ ಚಾಲಕರು ಅದನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ. ಬುದ್ದಿ ಹೇಳಲು ಬಂದವರಿಗೆ ನಿಂದಿಸಿ ತಮ್ಮ ಹೊಡೆದಾಟ ಮುಂದುವರೆಸಿದರು. ಪರಿಣಾಮ ಕೆಲ ಕಾಲ ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅದಾದ ನಂತರ ಈ ವಿಷಯ ಪೊಲೀಸರಿಗೆ ಗೊತ್ತಾಗಿದ್ದು, ಪೊಲೀಸರು ಆಗಮಿಸಿ ಅವರಿಬ್ಬರ ಹೊಡೆದಾಟ ತಪ್ಪಿಸಿದರು. ಸುಗಮ ಸಂಚಾರಕ್ಕೂ ಅನುವು ಮಾಡಿಕೊಟ್ಟರು.
ಗಾಯಗೊಂಡ ಚಾಲಕನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿದೆ. ಪ್ರಕರಣದ ಕುರಿತು ಪೊಲೀಸರು ಸಮಗ್ರ ವಿಚಾರಣೆ ನಡೆಸಿದ್ದಾರೆ..