ಗೋಕರ್ಣದ ಅಶೋಕೆಗೆ ಬಂದಿದ್ದ ಯುವಕರೊಬ್ಬರು ಜೊಯಿಡಾದ ಸ್ವಾಮೀಜಿಯೊಬ್ಬರ ಕಾಟಕ್ಕೆ ಸಿಲುಕಿ ಸಾವನಪ್ಪಿದ್ದಾರೆ. ಮಗನ ಸಾವಿಗೆ ನ್ಯಾಯ ಕೊಡಿಸುವಂತೆ ಕೋರಿ ಕುಟುಂಬದವರು ಮಾಧ್ಯಮದವರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಜೊಯಿಡಾದ ಗಾವಡೆವಾಡದಲ್ಲಿ ದಶರಥ ನಾರಾಯಣ ನಾಯ್ಕ ಅವರು ವಾಸವಾಗಿದ್ದಾರೆ. ಶಾಮಿಯಾನ ಹಾಕುವ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದಾರೆ. ಹೀಗಿರುವಾಗ ಅವರ ಮಗ ದ್ರುವ ನಾಯ್ಕ ಅವರು ಅಗಸ್ಟ 16ರಂದು ಗೋಕರ್ಣದ ಅಶೋಕೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಗೋಕರ್ಣದ ಅಶೋಕೆಯ ರಾಮಚಂದ್ರಾಪುರ ಮಠದಲ್ಲಿ ಚಾತುರ್ಮಾಸ ಕಾರ್ಯಕ್ರಮ ನಡೆಯುತ್ತಿದ್ದು, ಗೋಮಾಂತಕ ಸಮಾಜದಿಂದ ಸೇವೆ ನೀಡಲು ಆಗಮಿಸಿದ್ದ ದ್ರುವ ನಾಯ್ಕ ಅವರು ಅಲ್ಲಿನ ಹುಡುಗಿಯರ ಹಾಸ್ಟೇಲ್ ಹೋಗುವ ರಸ್ತೆ ಅಂಚಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹುಡುಗಿ ವಿಷಯವಾಗಿ ನಡೆದ ಹೊಡೆದಾಟ ಈ ಸಾವಿಗೆ ಮುಖ್ಯ ಕಾರಣವಾಗಿದೆ.
ದ್ರುವಾ ನಾಯ್ಕ ಅವರು ಡಿಪ್ಲೋಮಾ ಓದಿದ್ದರು. ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಅಗಸ್ಟ 16ರ ಬೆಳಗ್ಗೆ 6 ಗಂಟೆಗೆ ಅವರು ಗೋಕರ್ಣಕ್ಕೆ ಹೊರಟಿದ್ದು, 10.30ಕ್ಕೆ ಅಶೋಕೆ ತಲುಪಿದ್ದರು. ಅಶೋಕೆಯಲ್ಲಿ ನಡೆದ ಪೂಜೆ-ಪಲ್ಲಕ್ಕಿ ಸೇವೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ಈ ವೇಳೆ ಅವರ ತಂದೆ ದಶರಥ ನಾಯ್ಕ ಅವರಿಗೆ ಫೋನ್ ಒಂದು ಬಂದಿತು. ಫೋನ್ ಮಾಡಿದ ಸಂತೋಷ ಮಂತೆರೋ ಅವರು `ನಿನ್ನ ಮಗ ಏನು ಲಪಟಾ ಮಾಡಿದ್ದಾನೆ?’ ಎಂದು ಪ್ರಶ್ನಿಸಿದ್ದರು. ಆಗ, ದಶರಥ ನಾಯ್ಕ ಅವರು `ಪೂಜೆಯಲ್ಲಿದ್ದೇನೆ. ಆತನಿಗೆ ಕೇಳಿ ಹೇಳುವೆ’ ಎಂದರು. 2 ನಿಮಿಷದ ನಂತರ ಮತ್ತೆ ಫೋನ್ ರಿಂಗ್ ಆಗಿದ್ದು, `ನಿನ್ನ ಮಗ ಜೊಯಿಡಾದ ದೊಡ್ಡ ಲಪಟಾ ಮಾಡಿದ್ದಾನೆ’ ಎಂದು ಸಂತೋಷ ಮಂತೆರೋ ಹೇಳಿದ್ದರು. `ನಾಳೆ ಬಂದು ಮಾತನಾಡುವೆ’ ಎಂದು ದಶರಥ ನಾಯ್ಕ ಅವರು ಫೋನ್ ಕಟ್ ಮಾಡಿದ್ದರು.
ಅದಾದ ನಂತರ ಮಧ್ಯಾಹ್ನ ದಶರಥ ನಾಯ್ಕ ಅವರಿಗೆ ಅವರ ಮಗಳು ದಿವ್ಯಾ ನಾಯ್ಕ ಅವರು ಫೋನ್ ಮಾಡಿದರು. `ಅಣ್ಣ ದ್ರುವಾ ನಾಯ್ಕ ಜೀವ ಬಿಡುವುದಾಗಿ ಹೇಳಿದ. ಆತನನ್ನು ಹುಡುಕಿ’ ಎಂದು ದಿವ್ಯಾ ನಾಯ್ಕ ಅವರು ಹೇಳಿದರು. ಆಗ, ದಶರಥ ನಾಯ್ಕ ಅವರು ಅಶೋಕೆಯಲ್ಲಿ ಹುಡುಕಿದಾಗ ದ್ರುವಾ ನಾಯ್ಕ ಅವರು ಕಾಣಲಿಲ್ಲ. ಫೋನ್ ಮಾಡಿದಾಗ `ಹುಡುಗಿ ವಿಷಯದಲ್ಲಿ ರಘುವೀರ ಸ್ವಾಮೀ ಹಾಗೂ ಹುಡುಗಿ ತಂದೆ ನಾಗರಾಜ ನಾರಾಯಣ ನಾಯ್ಕ ಅವರು ತನಗೆ ಹೊಡೆದಿದ್ದಾರೆ. ಜೊಯಿಡಾದ ಮನೆಗೆ ಕರೆಯಿಸಿ ಹೊಡೆದಿದ್ದು, ಮೊಬೈಲಿನಲ್ಲಿರುವ ಫೋಟೋ ಎಡಿಟ್ ಮಾಡಿ ಬೆದರಿಕೆ ಹಾಕಿದ್ದಾರೆ. ನನ್ನ ಮೊಬೈಲ್ ಸಹ ಸ್ವಾಮೀಜಿ ಬಳಿಯಿದೆ’ ಎಂದು ದ್ರುವಾ ನಾಯ್ಕ ವಿವರಿಸಿದ್ದರು. `ಅದಾದ ನಂತರ ಜೀವ ಬಿಡುವೆ’ ಎಂದು ಹೇಳಿ ಫೋನ್ ಕಟ್ ಮಾಡಿದ್ದರು.
ಇದರಿಂದ ಆತಂಕಗೊoಡ ದಶರಥ ನಾಯ್ಕ ಅವರು ಅಶೋಕೆಯ ಎಲ್ಲಾ ಕಡೆ ಮಗನ ಹುಡುಕಾಟ ನಡೆಸಿದರು. ಮತ್ತೆ ಎಷ್ಟು ಫೋನ್ ಮಾಡಿದರೂ ದ್ರುವ ನಾಯ್ಕ ಫೋನಿಗೆ ಸಿಗಲಿಲ್ಲ. ಅಶೋಕೆ ಮಠ ಹಾಗೂ ಕಾಡಿನಲ್ಲಿ ಹುಡುಕಾಟ ಮುಂದುವರೆಸಿದಾಗ ಮಠದಿಂದ ಹುಡುಗಿಯರ ಹಾಸ್ಟೇಲ್ ಹೋಗುವ ರಸ್ತೆಯಲ್ಲಿ ದ್ರುವಾ ನಾಯ್ಕ ಅವರು ನೇಣಿಗೆ ಶರಣಾಗಿದ್ದರು. 18 ವರ್ಷದ ಮಗನನ್ನು ಕಳೆದುಕೊಂಡ ದಶರಥ ನಾಯ್ಕ ಅವರು ಗೋಕರ್ಣ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಜೊಯಿಡಾದ ರಘುವೀರ ಸ್ವಾಮೀಜಿ (ರೀತ್ವಿಕ್ ರೂಪೇಶ ನಾಯ್ಕ) ಹಾಗೂ ನಾಗರಾಜ ನಾರಾಯಣ ನಾಯ್ಕ ಅವರೇ ದ್ರುವ ನಾಯ್ಕ ಅವರ ಸಾವಿಗೆ ಕಾರಣ ಎಂದವರು ದೂರಿದರು. ತಮಗೆ ನ್ಯಾಯ ಕೊಡಿಸಿ ಎಂದು ದಶರಥ ನಾಯ್ಕ ಅವರು ಮಾಧ್ಯಮದವರ ಮುಂದೆಯೂ ಮನವಿ ಮಾಡಿದರು.