ಭಟ್ಕಳದ ಮೂವರು ಅಂಕೋಲಾ ಹಾಗೂ ಯಲ್ಲಾಪುರಕ್ಕೆ ಗಾಂಜಾ ಮಾರಾಟಕ್ಕೆ ಬಂದಿದ್ದು, ನಶೆಯಲ್ಲಿರುವಾಗಲೇ ಅವರು ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಹಾಗೂ ಮಹಮದ್ ಅಬೀದ್ ಅವರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ.
ಭಟ್ಕಳ ಗುಳ್ಮೆಯಲ್ಲಿ ಬದುದ್ದಿನ್ ಅಮನ್ ಮಹಮದ್ ಹುಸೇನ್ ಅವರು ವಾಸವಾಗಿದ್ದಾರೆ. ಅದೇ ಊರಿನಲ್ಲಿ ಅಬ್ದುಲ್ ಅಜೀಜ್ ಭಾಷಾ ಶೇಖ್ ಅವರು ವಾಸವಾಗಿದ್ದಾರೆ. 20 ಹಾಗೂ 18 ವರ್ಷದ ಅವರಿಬ್ಬರು ಅದೇ ಊರಿನ 19 ವರ್ಷದ ಮಹಮದ್ ಅಬೀದ್ ಸಯ್ಯದ್ ರಶೀದ್ ಅವರ ಜೊತೆ ಹೊಟೇಲ್ ಕೆಲಸ ಮಾಡಿಕೊಂಡಿದ್ದಾರೆ. ಆ ಹೊಟೇಲ್ ಕೆಲಸದ ಆದಾಯ ಸಾಲದ ಕಾರಣ ಸಣ್ಣ ವಯಸ್ಸಿನಲ್ಲಿಯೇ ಅಡ್ಡದಾರಿ ಹಿಡಿದಿದ್ದಾರೆ. ಈ ಮೂವರು ಸೇರಿ ಜುಲೈ 31ರಂದು ಗಾಂಜಾ ಮಾರಾಟಕ್ಕಾಗಿ ಯಲ್ಲಾಪುರಕ್ಕೆ ಬಂದಿದ್ದಾರೆ. ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಅವರು ಈ ವೇಳೆ ಗಾಂಜಾ ನಶೆಯಲ್ಲಿದ್ದು, ಬಸ್ ನಿಲ್ದಾಣದ ಬಳಿ ಅಲೆದಾಡುತ್ತಿದ್ದ ಅವರನ್ನು ಯಲ್ಲಾಪುರ ಪಿಸೈ ರಾಜಶೇಖರ ವಂದಲಿ ಅವರು ಹಿಡಿದಿದ್ದಾರೆ. ಅವರಿಬ್ಬರ ವೈದ್ಯಕೀಯ ಪರೀಕ್ಷೆ ನಡೆಸಿ, ನಂತರ ಕಾನೂನು ಕ್ರಮ ಜರುಗಿಸಿದ್ದಾರೆ.
ಪೊಲೀಸರ ವಿಚಾರಣೆ ವೇಳೆ ಮೂವರು ಗಾಂಜಾ ವ್ಯಾಪಾರಿಗಳು ಯಲ್ಲಾಪುರಕ್ಕೆ ಬಂದಿದ್ದು ಗೊತ್ತಾಗಿದೆ. ಆ ಮೂವರಲ್ಲಿ ಮಹಮದ್ ಅಬೀದ್ ಅವರು ಬಸ್ಸು ಏರಿ ಭಟ್ಕಳದ ಕಡೆ ಹೊರಟಿದ್ದು, ಯಲ್ಲಾಪುರ ಪೊಲೀಸರ ಮಾಹಿತಿ ಮೇರೆಗೆ ಅಂಕೋಲಾ ಪಿಸೈ ವಿಶ್ವನಾಥ ನಿಂಗೊಳ್ಳಿ ಅವರು ಬಾಳೆಗುಳಿ ಕ್ರಾಸಿನಲ್ಲಿ ಆ ಬಸ್ಸು ಅಡ್ಡ ಹಾಕಿದ್ದಾರೆ. ಆಗ, ಅದರಲ್ಲಿ ಮಹಮದ್ ಅಬೀದ್ ಅವರು ಗಾಂಜಾ ಜೊತೆ ಸಿಕ್ಕಿ ಬಿದ್ದಿದ್ದಾರೆ. ವಿಚಾರಣೆ ವೇಳೆ ಮಹಮದ್ ಅಬೀದ್ ಅವರು ಸಹ ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಅವರ ಜೊತೆ ಗಾಂಜಾ ವ್ಯಾಪಾರಕ್ಕೆ ಬಂದಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಲಾರಿ ಚಾಲಕರಿಗೆ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸಿದ್ದ ಮಹಮದ್ ಅಬೀದ್ ಅವರನ್ನು ಅಂಕೋಲಾ ಪೊಲೀಸರು ಕೂಡಲೇ ವಶಕ್ಕೆಪಡೆದಿದ್ದಾರೆ. ಅದಾದ ನಂತರ ಯಲ್ಲಾಪುರ ಪೊಲೀಸರು ಸಹ ಬದುದ್ಧೀನ್ ಅಮೀನ್ ಹಾಗೂ ಅಬ್ದುಲ್ ಅಜೀಸ್ ಅವರನ್ನು ಅಂಕೋಲಾ ಪೊಲೀಸರಿಗೆ ಒಪ್ಪಿಸಿದ್ದು, ಆ ಮೂವರ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದಾರೆ.
`ಮಾದಕ ವ್ಯಸನ ಜೀವನಕ್ಕೆ ಮಾರಕ’