ಗೋಕರ್ಣದಲ್ಲಿ ನಡೆದ ಗಣೇಶ ಉತ್ಸವ ಮೆರವಣಿಗೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುವ ವ್ಯಕ್ತಿ ಆಗಮಿಸಿದ್ದು, ಅವರು ಇಲ್ಲಿನ ಹ್ಯಾಂಗ್ಯೋ ಐಸ್ ಕ್ರೀಂ ಮಳಿಗೆಗೂ ಭೇಟಿ ನೀಡಿದ್ದಾರೆ. ಗಣೇಶ ಉತ್ಸವದ ಮೆರವಣಿಗೆಯಲ್ಲಿ ಕಾಣಿಸಿಕೊಂಡ ಮೋದಿ ಅವರನ್ನು ಹೋಲುವ ಸದಾನಂದ ನಾಯಕ ಅವರ ಜೊತೆ ಅನೇಕರು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ಗೋಕರ್ಣದ ಮೇಲಿನಕೇರಿಯ ವಿಜಯ ವಿನಾಯಕ ಸಾರ್ವಜನಿಕ ಗಣೇಶ ಉತ್ಸವ ಸಮಿತಿಯವರು ಈ ಬಾರಿ ನರೇಂದ್ರ ಮೋದಿ ಅವರನ್ನು ಹೋಲುವ ಸದಾನಂದ ನಾಯಕ ಅವರನ್ನು ಕರೆಯಿಸಿದ್ದಾರೆ. ಶನಿವಾರ ಸಂಜೆ ನಡೆದ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಉಡುಪಿಯ ಸದಾನಂದ ನಾಯಕ ಅವರು ಮೋದಿ ಅವರಂತೆಯೇ ವೇಷಧರಿಸಿ ಜನರ ಜೊತೆ ಬೆರೆತಿದ್ದಾರೆ. ಮೆರವಣಿಗೆ ನಡುವೆ ಹ್ಯಾಂಗ್ಯೋ ಐಸ್ ಕ್ರೀಂ ಮಳಿಗೆಗೆ ಭೇಟಿ ನೀಡಿ, ವಿವಿಧ ಬಗೆಯ ಐಸ್ ಕ್ರೀಂ ಕುರಿತು ಮಾಹಿತಿಪಡೆದಿದ್ದಾರೆ. ಇದರೊಂದಿಗೆ ಭಜನಾ ನೃತ್ಯ, ಕೋಲಾಟ, ಡೋಲು ಕುಣಿತ, ವಿವಿಧ ಸ್ತಬ್ಧ ಚಿತ್ರಗಳ ಪ್ರದರ್ಶನವೂ ಮೆರವಣಿಗೆಯ ಮೆರಗು ಹೆಚ್ಚಿಸಿದೆ.
ಗಣೇಶ ವಿಸರ್ಜನೆ ವೇಳೆ ದೇವರ ನಾಮಸ್ಮರಣೆ, ಕೋಲಾಟ, ಮಕ್ಕಳ ತಂಡದ ನೃತ್ಯ, ಭಜನೆಗಳು ಜೋರಾಗಿದ್ದವು. ಗೂಂಬೆಗಳ ಸಾಲು ಸಾಗುವ ದೃಶ್ಯ, ವಾದ್ಯಘೋಷದ ಜೊತೆ ಸಂಸ್ಕೃತಿ – ಪರಂಪರೆ ಬಿಂಬಿಸುವ ರೂಪಕಗಳು ಆಕರ್ಷಿಸಿದವು. ಗಣೇಶ ಮೂರ್ತಿಯನ್ನು ಕಡಲ ತೀರದಿಂದ ಸಮುದ್ರದವರೆಗೆ ಹೊತ್ತು ಸಾಗಿದ ಭಕ್ತರು ಸಮುದ್ರದಲ್ಲಿ ಮೂರ್ತಿ ವಿಸರ್ಜನೆ ಮಾಡಿದರು. ಗಣೇಶ ವಿಗ್ರಹದ ಜೊತೆ ಮೋದಿ ವೇಷಧಾರಿಯ ಜೊತೆಯೂ ಅನೇಕರು ಸೆಲ್ಪಿ ಕ್ಲಿಕ್ಕಿಸಿಕೊಂಡರು.