ಮಂಕಿಯಲ್ಲಿ ವಾಸವಾಗಿದ್ದ ಮಂಗಲಾ ನಾಯ್ಕ ಅವರಿಗೆ 27 ವರ್ಷಕ್ಕೆ ಹೃದಯಘಾತವಾಗಿದೆ. ಹೀಗಾಗಿ ಅವರು ಒಂದೇ ಕ್ಷಣದಲ್ಲಿ ಉಸಿರು ನಿಲ್ಲಿಸಿದ್ದಾರೆ.
ಹೊನ್ನಾವರದ ಮಂಕಿ ಬಳಿಯ ದೊಡ್ಡಗುಂದ ಬಳಿ ಮಂಗಲಾ ಗಣಪತಿ ನಾಯ್ಕ ಅವರು ವಾಸವಾಗಿದ್ದರು. ಐದು ವರ್ಷದ ಹಿಂದೆ ಅವರು ವಿವಾಹವಾಗಿ ಈ ಊರಿಗೆ ಬಂದಿದ್ದರು. ಇಷ್ಟು ವರ್ಷಗಳ ಕಾಲ ಆರೋಗ್ಯವಾಗಿಯೇ ಇದ್ದ ಅವರು ಅಗಸ್ಟ 25ರಂದು ರಕ್ತದ ವಾಂತಿ ಮಾಡಿದರು. ಮಂಗಲಾ ನಾಯ್ಕ ಅವರನ್ನು ಅವರ ಪತಿ ಹಾಗೂ ಕುಟುಂಬದವರು ಸೇರಿ ಆಸ್ಪತ್ರೆಗೆ ಕರೆದೊಯ್ದರು. ಬೆಳಗ್ಗೆ 5 ಗಂಟೆಗೆ ಅವರನ್ನು ಆಸ್ಪತ್ರೆಗೆ ಒಯ್ದು ಚಿಕಿತ್ಸೆ ನೀಡುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
ಆಸ್ಪತ್ರೆಗೆ ಒಯ್ಯುವ ದಾರಿ ಮಧ್ಯೆಯೇ ಮಂಗಲಾ ನಾಯ್ಕ ಅವರು ಸಾವಪ್ಪಿದ್ದು, ಕುಟುಂಬದವರು ಈ ವಿಷಯವನ್ನು ಅವರ ತಂಗಿಗೆ ಹೇಳಿದರು. ದಾಂಡೇಲಿಯ ಜಿ ಎನ್ ರಸ್ತೆಯಲ್ಲಿ ವಾಸವಾಗಿರುವ ಮಂಗಲಾ ನಾಯ್ಕ ಅವರ ಸಹೋದರಿ ಲಲಿತಾ ಸಚಿನ್ ಗುಂಜಿಕರ್ ಅವರು ಅಕ್ಕನ ಸಾವಿನ ಬಗ್ಗೆ ಅನುಮಾನವ್ಯಕ್ತಪಡಿಸಿದರು. ಸಾವಿನ ತನಿಖೆಗೆ ಆಗ್ರಹಿಸಿ ಅವರು ಪೊಲೀಸ್ ದೂರು ನೀಡಿದ್ದು, ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಸಾವಿನ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.