ಹುಬ್ಬಳ್ಳಿಯಿಂದ ಅಂಕೋಲಾಗೆ ಸಂಚರಿಸುತ್ತಿದ್ದ ಸರ್ಕಾರಿ ಬಸ್ಸು ಯಲ್ಲಾಪುರದ ಬಳಿ ಬ್ರೆಕ್ ಫೇಲ್ ಆಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಜನರ ಜೀವ ಉಳಿದಿದೆ. ನಿಯಂತ್ರಣ ತಪ್ಪುವ ಸಾಧ್ಯತೆಯಿದ್ದ KSRTC ಬಸ್ಸನ್ನು ಚಾಲಕ ಅಂತ್ಯoತ ಸಂಯಮದಿoದ ಓಡಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿರಿಸಿದ್ದಾರೆ.
ಅಂಕೋಲಾ ಡಿಪೋಗೆ ಸೇರಿದ ಬಸ್ಸು ಬುಧವಾರ ಹುಬ್ಬಳ್ಳಿಗೆ ಹೋಗಿತ್ತು. ಹುಬ್ಬಳ್ಳಿಯಿಂದ ಮರಳುವಾಗ ಅದು ಯಲ್ಲಾಪುರದ ಬಳಿ ಬ್ರೆಕ್ ಫೇಲ್ ಆಯಿತು. ಬುಧವಾರ ಮಧ್ಯಾಹ್ನ ಯಲ್ಲಾಪುರ ಬಸ್ ನಿಲ್ದಾಣದ ಬಳಿ ಬಸ್ಸು ಹಾಳಾಗಿದ್ದು, ಈ ಪರಿಸ್ಥಿತಿಯನ್ನು ಅರಿತ ಚಾಲಕ ಕಮಲಾಕ್ಷ ನಾಯ್ಕ ಅವರು ಯಾವುದೇ ರೀತಿಯಲ್ಲಿ ಗಾಬರಿಗೊಳ್ಳದೆ ಸಮಾಧಾನಚಿತ್ತದಿಂದ ಬಸ್‌ನ್ನು ನಿಯಂತ್ರಿಸಿದರು. ವೇಗವಾಗಿದ್ದ ಬಸ್ಸನ್ನು ಹಂತ ಹಂತವಾಗಿ ಹತೋಟಿಗೆ ತಂದರು. ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಬರಿಯಾಗಿದ್ದು, ನಿರ್ವಾಹಕಿ ಪಲ್ಲವಿ ಅವರು ಜನರಿಗೆ ತಿಳಿ ಹೇಳಿ, ಸಮಾಧಾನ ಮಾಡಿದರು.
ಯಲ್ಲಾಪುರ ನಿಲ್ದಾಣದಲ್ಲಿ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಿದ ನಂತರ ಬಸ್ಸನ್ನು ಡಿಪೋಗೆ ಒಯ್ಯಲಾಯಿತು. ಬಸ್ ದುರಸ್ಥಿ ನಂತರ ಮತ್ತೆ ಪ್ರಯಾಣಿಕರನ್ನು ಹೊತ್ತ ಆ ಬಸ್ಸು ಅಂಕೋಲಾಗೆ ಬಂದಿತು. ಬ್ರೇಕ್ ವೈಫಲ್ಯದಂತಹ ತುರ್ತು ಪರಿಸ್ಥಿತಿಯಲ್ಲಿ ಚಾಲಕ ಕಮಲಾಕ್ಷ ಅವರು ತೋರಿದ ಸಮಯಪ್ರಜ್ಞೆ, ಸಂಯಮ ಮತ್ತು ಕರ್ತವ್ಯನಿಷ್ಠೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದರು.