ಕಾರವಾರದಲ್ಲಿ ಹೋಂ ಗಾರ್ಡ ಆಗಿದ್ದ ಬಸವರಾಜು ಬೋವಿ ಹಾಗೂ ನಾಗವೇಣಿ ನಾಯ್ಕ ಎಂಬಾತರು ಗೋವಾ ಮದ್ಯ ಸಾಗಾಟ ಮಾಡಿ ಸಿಕ್ಕಿಬಿದ್ದಿದ್ದಾರೆ. ಸರಾಯಿ ಹೊತ್ತು ಕೇರಳಕ್ಕೆ ಹೊರಟಿದ್ದ ಅವರನ್ನು ಮಂಗಳೂರಿನ ಅಧಿಕಾರಿಗಳು ಹಿಡಿದಿದ್ದಾರೆ.
ಕಾರವಾರದ ಹೊಸ ಕೆ ಎಚ್ ಬಿ ಕಾಲೋನಿ ಹಬ್ಬುವಾಡದಲ್ಲಿ ಬಸವರಾಜು ಹನುಮಂತಪ್ಪ ಬೋವಿ (34) ಅವರು ವಾಸವಾಗಿದ್ದಾರೆ. ಕಾರವಾರದ ದೇವಳಮಕ್ಕಿ ಬಳಿ ನಾಗವೇಣಿ ಮಹಾಬಲೇಶ್ವರ ನಾಯ್ಕ (33) ಅವರು ವಾಸವಾಗಿದ್ದಾರೆ. ಅವರಿಬ್ಬರು ಸಹ ಹೋಂ ಗಾರ್ಡ ಆಗಿದ್ದಾರೆ. ಕರ್ತವ್ಯದ ವೇಳೆಯಲ್ಲಿಯೇ ಅವರಿಬ್ಬರು ಪರಿಚಿತರಾಗಿದ್ದು, ದಿನವಿಡೀ ದುಡಿದು ದುಡ್ಡು ಸಂಪಾದಿಸುವ ಬದಲು ಅಡ್ಡದಾರಿ ಹಿಡಿದು ಹಣಗಳಿಸಲು ಅವರಿಬ್ಬರು ಯೋಚಿಸಿದ್ದರು. ನಾಗವೇಣಿ ನಾಯ್ಕ ಅವರು ಆರೋಗ್ಯ ಇಲಾಖೆ ಸೇರಿ ಅಲ್ಲಿ ತಾತ್ಕಾಲಿಕವಾಗಿ ಕೆಲಸ ಶುರು ಮಾಡಿದ್ದು, ಬಿಡುವಿನ ವೇಳೆ ಬಸವರಾಜು ಬೋವಿ ಅವರ ಜೊತೆ ಸೇರಿ ಮದ್ಯ ಸಾಗಾಟ ಮಾಡುತ್ತಿದ್ದರು. ಕಾರವಾರದ ವಿನಯ ನಾಗೇಕರ್, ಉಡುಪಿಯ ಪ್ರಶಾಂತ ಸುವರ್ಣ ಹಾಗೂ ಕೇರಳದ ಚಂದ್ರಶೇಖರ್ ಎಂಬಾತರು ಈ ಕಳ್ಳ ಸಾಗಾಟಕ್ಕೆ ಸಹಾಯ ಮಾಡಿದ್ದರು. ಸಹಾಯ ಮಾಡಿದವರು ತಪ್ಪಿಸಿಕೊಂಡಿದ್ದು, ಮದ್ಯ ಸಾಗಾಟ ಮಾಡಿದವರು ಮಾತ್ರ ಸಿಕ್ಕಿಬಿದ್ದರು.
ಅದರಂತೆ, ಮೊನ್ನೆ ಕೆಎ 30 ನೋಂದಣಿಯ ಶಿಪ್ಡ್ ಡಿಸೈರ್ ಕಾರಿನಲ್ಲಿ ಬಸವರಾಜು ಬೋವಿ ಅವರು ಗೋವಾದಿಂದ 438 ಲೀ ಸರಾಯಿ ತಂದಿದ್ದರು. ಕರ್ನಾಟಕದ ತೆರಿಗೆ ತಪ್ಪಿಸಿ ಅವರು ಆ ಸರಾಯಿಯನ್ನು ಕೇರಳಕ್ಕೆ ಸಾಗಿಸುವ ಸಿದ್ಧತೆ ಮಾಡಿದ್ದರು. ಆ ಕಾರಿನಲ್ಲಿ ನಾಗವೇಣಿ ನಾಯ್ಕ ಅವರು ಜೊತೆಯಾಗಿ ಹೊರಟಿದ್ದು, ಅವರಿಬ್ಬರು ಉತ್ತರ ಕನ್ನಡ ಜಿಲ್ಲೆಯ ಗಡಿ ದಾಟಿದರು. ಅದಾದ ನಂತರ ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ ಎಚ್ ಅವರಿಗೆ ಈ ಕಳ್ಳ ಸಾಗಾಟದ ಬಗ್ಗೆ ಮಾಹಿತಿ ಸಿಕ್ಕಿತು. ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ಸೂಚನೆ ಮೇರೆಗೆ ಅಬಕಾರಿ ಉಪಅಧೀಕ್ಷಕಿ ಗಾಯತ್ರಿ ಸಿ ಎಚ್ ಅವರು ಆ ಕಾರಿಗೆ ಅಡ್ಡಲಾಗಿ ಕೈ ಮಾಡಿದರು.
ಬಂಟ್ವಾಳ ಉಪವಿಭಾಗದ ಉಪ ಅಧೀಕ್ಷಕ ಸಂತೋಷ್ ಮೋಡಗಿ, ಬಂಟ್ವಾಳ ತಾಲೂಕು ವಲಯ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಶಿವಣಗಿ, ತಲಪಾಡಿ ಚೆಕ್‌ಪೋಸ್ಟ್ ನಿರೀಕ್ಷಕ ದತ್ತಗುರು ಅಥೆಣಿ, ಉಪ ನಿರೀಕ್ಷಕ ಜಯಪ್ಪ, ಶಿವಶಂಕರ್, ಅಭಿಷೇಕ್ ಹಾಗೂ ಪೇದೆ ಪ್ರಕಾಶ್ ಸೇರಿ ಕಾರು ತಪಾಸಣೆ ಮಾಡಿದಾಗ ಅದರಲ್ಲಿ ಭಾರೀ ಪ್ರಮಾಣದ ಮದ್ಯದ ಬಾಟಲಿಗಳು ಸಿಕ್ಕಿದವು. ಅದೆಲ್ಲವನ್ನು ಅಧಿಕಾರಿಗಳು ವಶಕ್ಕೆಪಡೆದು, ಅಬಕಾರಿ ಜಂಟಿ ಆಯುಕ್ತರ ಕಚೇರಿ ನಿರೀಕ್ಷಕಿ ಸುನಿತಾ ಪ್ರಕರಣ ದಾಖಲಿಸಿದರು.
`ಅಕ್ರಮ ಮದ್ಯ ಸಂಗ್ರಹ-ಸಾಗಾಟ ಎರಡೂ ಅಪರಾಧ’