ಕಳೆದ 15 ವರ್ಷಗಳಿಂದ ಜನಶಕ್ತಿ ವೇದಿಕೆಯವರು ಕಿವುಡ ಹಾಗೂ ಮೂಗ ಶಾಲೆಯ ಮಕ್ಕಳಿಗೆ ಹಾಲುಣಿಸುವ ಮೂಲಕ ನಾಗರ ಪಂಚಮಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದು, ಈ ಬಾರಿ ಮಕ್ಕಳಿಗೆ ನೈಜ ನಾಗರ ಹಾವಿನ ದರ್ಶನ ಮಾಡಿಸಿ ಅದರ ಬಗ್ಗೆ ಅರಿವು ಮೂಡಿಸಿದ್ದಾರೆ.
ಆಶಾ ನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಭಾಗವಹಿಸಿ ಮಕ್ಕಳ ಜೊತೆ ಸಮಯ ಕಳೆದಿದ್ದಾರೆ. `ಕಲ್ಲಿನ ನಾಗರ ಮೂರ್ತಿಗಳಿಗೆ ಹಾಗೂ ಹುತ್ತಗಳಿಗೆ ಹಾಲು ಎರೆಯುವ ಬದಲು ಅದನ್ನು ಅಗತ್ಯವಿದ್ದವರಿಗೆ ಕೊಟ್ಟರೆ ಅದೇ ಆನಂದ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಈ ವೇಳೆ ಕರೆ ನೀಡಿದ್ದಾರೆ. `ಹಾಲನ್ನು ವಿನಾಕಾರಣ ವ್ಯರ್ಥ ಮಾಡುವುದರಿಂದ ಪರಿಸರದ ಮೇಲೂ ದುಷ್ಪರಿಣಾಮ ಆಗಲಿದೆ. ಹುತ್ತಗಳಿಗೆ ಹಾಲು ಎರೆಯುವುದರಿಂದ ಹಾವುಗಳ ಜೀವಕ್ಕೂ ಅಪಾಯ ಉಂಟಾಗುವ ಸಾಧ್ಯತೆಯಿದೆ’ ಎಂದವರು ಅರಿವು ಮೂಡಿಸಿದ್ದಾರೆ.
`ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬಾರದಂತೆ ಹಾಗೂ ಸಮಾಜದ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ನಾಗರ ಪಂಚಮಿಯನ್ನು ಆಚರಿಸಬೇಕು. ಕಲ್ಲಿನ ನಾಗರಿಗೆ ಅಥವಾ ಹುತ್ತಕ್ಕೆ ಕೊಡಗಟ್ಟಲೆ ಹಾಲು ಎರೆಯುವ ಬದಲು ಒಂದು ಅಥವಾ ಎರಡು ಚಮಚ ಹಾಲನ್ನು ಭಕ್ತಿಯಿಂದ ಅರ್ಪಿಸಿ ಪೂಜೆ ಸಲ್ಲಿಸುವ ಮೂಲಕ ಧಾರ್ಮಿಕ ಆಚರಣೆಯ ಜೊತೆಗೆ ಸಮಾಜದ ಮತ್ತು ಪರಿಸರದ ಕಾಳಜಿಯನ್ನೂ ಕಾಪಾಡಬೇಕು’ ಎಂದು ಕಾರ್ಯಕ್ರಮದಲ್ಲಿದ್ದವರು ಹೇಳಿದ್ದಾರೆ. ಪರಿಸರ ಸಂರಕ್ಷಣೆ, ಮೂಢನಂಬಿಕೆಗಳ ನಿವಾರಣೆ ಹಾಗೂ ವೈಜ್ಞಾನಿಕ ಮನೋಭಾವ ಬೆಳೆಸುವ ಅಗತ್ಯದ ಬಗ್ಗೆ ನ್ಯಾಯಾಧೀಶೆ ದಿವ್ಯಶ್ರೀ ಸಿ ಎಂ ಅವರು ಈ ವೇಳೆ ಮಾತನಾಡಿದ್ದಾರೆ.
ಪ್ರಮುಖರಾದ ಜಾರ್ಜ ಫರ್ನಾಂಡಿಸ್, ರಾಮಾ ನಾಯ್ಕ, ಉರಗ ತಜ್ಞ ಮಹೇಶ ನಾಯಕ, ನಿತ್ಯಾನಂದ ನಾಯ್ಕ, ರಾಜೇಶ್ ಬಾಡ್ಕರ್, ರತ್ನಾಕರ್ ಬಾಡ್ಕರ್, ರಮೇಶ್ ಗುನುಗಿ, ಸುರಜ್ ಕುರುಂಕರ್ ಹಾಗೂ ರಾಜೀವ್ ನಾಯ್ಕ್, ಶ್ರೀಕಾಂತ್ ನಾಯ್ಕ್, ವಸಂತ್ ಬಾಂಧೇಕರ ಸೇರಿ ಅನೇಕರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.