ಕಾರವಾರ ನೇವಲ್ ಬೇಸ್ ಒಳಗಿರುವ ಕೇಂದ್ರೀಯ ವಿದ್ಯಾಲಯದಲ್ಲಿ ಪಿಯುಸಿ ಶಿಕ್ಷಣ ಮೊಟಕುಗೊಳಿಸುವ ಆತಂಕ ಎದುರಾಗಿದೆ. ಈಗಾಗಲೇ PUC ಪ್ರಥಮ ವರ್ಷಕ್ಕೆ ಪ್ರವೇಶಪಡೆದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.
ಇಲ್ಲಿನ ಕೇಂದ್ರೀಯ ವಿದ್ಯಾಲಯದಲ್ಲಿ ಒಟ್ಟು 735 ವಿದ್ಯಾರ್ಥಿಗಳಿದ್ದಾರೆ. ಮೊದಲಿನಿಂದಲೂ ಇಲ್ಲಿ ಪಿಯುಸಿ ಕಲಿಕೆಯಿದ್ದು, ಈ ವರ್ಷ ಮಾತ್ರ ಬರೇ 6 ವಿದ್ಯಾರ್ಥಿಗಳು ಪಿಯುಸಿ ಪ್ರವೇಶಪಡೆದಿದ್ದಾರೆ. ವಿದ್ಯಾರ್ಥಿಗಳ ಕೊರತೆ ಹಿನ್ನಲೆ ಪಿಯುಸಿ ಶಿಕ್ಷಣವನ್ನೇ ಮೊಟಕುಗೊಳಿಸಲು ವಿದ್ಯಾಲಯದವರು ಮುಂದಾಗಿದ್ದು, ಈ ಬಗ್ಗೆ ಪಾಲಕರಿಗೂ ಸೂಚನೆ ರವಾನಿಸಿದ್ದಾರೆ. ಇದರಿಂದ ಆತಂಕಕ್ಕೆ ಒಳಗಾದ ಪಾಲಕರು ಕೇಂದ್ರಿಯ ವಿದ್ಯಾಲಯದ ಕ್ರಮವನ್ನು ಖಂಡಿಸಿದ್ದಾರೆ.
`ನಿಮ್ಮ ಮಕ್ಕಳ ಟೀಸಿ ಕೊಡುತ್ತೇವೆ. ಬೇರೆ ಶಾಲೆಗೆ ಕಳುಹಿಸಿ’ ಎಂದು ಬುಧವಾರ ಪ್ರಥಮ ಪಿಯುಸಿ ಮಕ್ಕಳ ಪಾಲಕರಿಗೆ ಸೂಚನೆ ಬಂದಿದೆ. `ಕೇಂದ್ರಿಯ ವಿದ್ಯಾಲಯದಲ್ಲಿ ಕೇಂದ್ರೀಯ ಪಠ್ಯಕ್ರಮ ಆಧರಿಸಿ ಪಾಠ ಮಾಡಲಾಗುತ್ತಿದ್ದು, ಆ ಪಠ್ಯಕ್ರಮ ಸಮೀಪದ ಯಾವ ಕಾಲೇಜುಗಳಲ್ಲಿಯೂ ಇಲ್ಲ. ದಿಢೀರ್ ಆಗಿ ಮಕ್ಕಳನ್ನು ಹೊರದಬ್ಬಿದರೆ ಅವರ ಶೈಕ್ಷಣಿಕ ಚಟುವಟಿಕೆ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎಂದು ಪಾಲಕರು ಆತಂಕವ್ಯಕ್ತಪಡಿಸಿದ್ದಾರೆ. ಇದೇ ವಿಷಯವಾಗಿ ಕಾಲೇಜು ಮುಖ್ಯಸ್ಥರು ಹಾಗೂ ಪಾಲಕರ ನಡುವೆ ಜಟಾಪಟಿ ನಡೆದಿದೆ.
`1ನೇ ತರಗತಿಯಿಂದಲೂ ನಾವು ಮಕ್ಕಳನ್ನು ಇಲ್ಲೇ ಕಳುಹಿಸಿದ್ದು, ಈಗಾಗಲೇ ಪಿಯುಸಿ ಪ್ರವೇಶಪಡೆದ ಕಾರಣ ಇಲ್ಲಿಯೇ ಅದನ್ನು ಮುಂದುವರೆಸಬೇಕು’ ಎಂದು ಪಾಲಕರು ಪಟ್ಟುಹಿಡಿದಿದ್ದಾರೆ. `ಪಿಯುಸಿ ಶಿಕ್ಷಣ ಕಲಿಸುವಿಕೆ ಮೊಟಕುಗೊಳಿಸುವುದಾದರೆ ಎರಡುವರೆ ತಿಂಗಳ ಹಿಂದೆಯೇ ಮಾಹಿತಿ ಕೊಡಬೇಕಿತ್ತು’ ಎಂದು ಸಹ ಪಾಲಕರು ವಾದಿಸಿದ್ದಾರೆ. ಸಾಕಷ್ಟು ವಾದ-ವಾಗ್ವಾದದ ನಂತರ ಗುರುವಾರ `ಪಿಯುಸಿ ಶಿಕ್ಷಣ ಮೊಟಕುಗೊಳಿಸುವುದಿಲ್ಲ’ ಎಂದು ಕೇಂದ್ರೀಯ ವಿದ್ಯಾಲಯದವರು ಹೇಳಿದ್ದಾರೆ.
`ಎಲ್ಲಾ ರೀತಿಯ ಗೊಂದಲ ಬಗೆಹರಿಸಲಾಗಿದೆ. ಪಿಯುಸಿ ಪ್ರವೇಶಪಡೆದ ಮಕ್ಕಳಿಗೆ ಯಾವುದೇ ಆತಂಕ ಮಾಡುವುದಿಲ್ಲ’ ಎಂದು ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಅಶೋಕಕುಮಾರ ಅವರು ಮಾಧ್ಯಮಕ್ಕೆ ಭರವಸೆ ನೀಡಿದ್ದಾರೆ. `ಕೇಂದ್ರೀಯ ವಿದ್ಯಾಲಯದವರು ಅನಗತ್ಯ ಗೊಂದಲ ಸೃಷ್ಠಿಸಿ ಮಕ್ಕಳು ಹಾಗೂ ಪಾಲಕರಿಗೆ ಸಮಸ್ಯೆ ಮಾಡುವುದು ಸರಿಯಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ವಿದ್ಯಾಲಯದವರು ಪೂರಕವಾಗಿರಬೇಕು’ ಎಂದು ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿದ್ಧಾರ್ಥ ನಾಯ್ಕ ಅವರು ಒತ್ತಾಯಿಸಿದ್ದಾರೆ.