ಕುಮಟಾದ ಹೊಲನಗದ್ದೆಯ ಕೊಂತಲಮನೆಯಲ್ಲಿ ಸುಜಾತಾ ಕುಮಾರ ಹೆಗಡೆ ಅವರು ವಾಸವಾಗಿದ್ದಾರೆ. ಜೀವನೋಪಾಯಕ್ಕಾಗಿ ಅವರು ಅಲ್ಲಿ ಅಂಗಡಿಯೊAದನ್ನು ನಡೆಸುತ್ತಿದ್ದಾರೆ. ದಿನವಿಡೀ ಆ ಅಂಗಡಿಯಲ್ಲಿ ವಿವಿಧ ವಸ್ತು ಮಾರುವ ಅವರು ಸಂಜೆ ಆದ ತಕ್ಷಣ ಅಕ್ರಮ ಸರಾಯಿ ಮಾರಾಟ ಶುರು ಮಾಡುತ್ತಾರೆ. ಅಂಗಡಿ ಎದುರಿನ ಸಿಮೆಂಟ್ ಕಟ್ಟೆಯನ್ನೇ ಅವರು ಮಿನಿ ಬಾರ್ ಆಗಿ ಪರಿವರ್ತಿಸುತ್ತಿದ್ದು, ಬಂದ ಗ್ರಾಹಕರೆಲ್ಲರಿಗೂ ಸರಾಯಿ ಸೇವೆ ನೀಡುತ್ತಾರೆ.
ಆದರೆ, ಸುಜಾತಾ ಹೆಗಡೆ ಅವರು ಸರಾಯಿ ಮಾರಾಟಕ್ಕೆ ಅನುಮತಿ ಪಡೆದಿಲ್ಲ. ಅವರ ಅಂಗಡಿ ಸಾರ್ವಜನಿಕ ಸ್ಥಳವಾಗಿದ್ದರಿಂದ ಅಲ್ಲಿ ಸರಾಯಿ ಸೇವನೆಗೂ ಅವಕಾಶ ಕೊಡುವ ಹಾಗಿಲ್ಲ. ಅದಾಗಿಯೂ, ಸುಜಾತಾ ಹೆಗಡೆ ಅವರು ಯಾರ ಅಳುಕು ಇಲ್ಲದೇ ತಮ್ಮ ದಂಧೆ ಮುಂದುವರೆಸಿದ್ದು, ಅದಕ್ಕೆ ಸದ್ಯ ಪೊಲೀಸರು ಕಡಿವಾಣ ಹಾಕಿದ್ದಾರೆ.
ಮೊನ್ನೆ ರಾತ್ರಿ 9 ಗಂಟೆ ವೇಳೆಗೆ ಕುಮಟಾ ಪಿಸೈ ಸಾವಿತ್ರಿ ನಾಯಕ ಅವರು ಹೊಲನಗದ್ದೆಯ ಕಡೆ ಹೋಗಿದ್ದು, ಸುಜಾತಾ ಹೆಗಡೆ ಅವರ ಅಂಗಡಿ ಮುಂದೆ ಬೆಳಕು ನೋಡಿದ್ದಾರೆ. ಸಮೀಪ ಹೋಗಿ ನೋಡಿದಾಗ ಅಲ್ಲಿ ಸರಾಯಿ ದಂಧೆಯ ಬಗ್ಗೆ ಗೊತ್ತಾಗಿದೆ. ದಾಳಿ ನಡೆಸಿದ ಪೊಲೀಸರು ಕುಡಿದು ಖಾಲಿಯಾದ ಸರಾಯಿ ಪ್ಯಾಕೆಟ್ ಜೊತೆ ಲೋಟ, ನೀರಿನ ಬಾಟಲಿ, ಚಿಪ್ಸಿನ ಕೊಟ್ಟೆಯನ್ನು ಜಪ್ತು ಮಾಡಿದ್ದಾರೆ.