ಕಾರವಾರ ಜೈಲಿನಿಂದ ಬಿಡುಗಡೆಯಾಗಿದ್ದ ಜಯಂತ ನಾಯ್ಕ ಎಂಬಾತರು ಕಾರಾಗೃಹದೊಳಗಿರುವ ಕೈದಿಯೊಬ್ಬರಿಗೆ ಫೋನ್ ಮಾಡಿ ತಮ್ಮ ಎದುರಾಳಿಯೊಬ್ಬರ ಮೇಲೆ ದಾಳಿ ನಡೆಸಲು ಸುಪಾರಿ ನೀಡಿದ್ದಾರೆ. ಕೈದಿಗಳ ನಡುವೆ ಗಲಾಟೆ ನಡೆದ ಬಳಿಕ ಕಾರಣ ಹುಡುಕಾಟ ನಡೆಸಿದಾಗ ಜೈಲಿನ ಒಳಗಿದ್ದ ಫೋನ್’ನಲ್ಲಿ ಈ ಸುಪಾರಿ ಮಾತುಕಥೆ ರೆಕಾರ್ಡ ಆಗಿರುವುದು ಗೊತ್ತಾಗಿದೆ!
ಉತ್ತರ ಕನ್ನಡ ಜಿಲ್ಲೆಯ ಕಾರವಾರ ಜೈಲಿನಲ್ಲಿ ಗೂಂಡಾಗಿರಿ, ಮಾದಕ ವಸ್ತುಗಳ ಸಾಗಾಟ, ಮೊಬೈಲ್ ಬಳಕೆ, ಜೈಲಿನಿಂದಲೇ ಅಪರಾಧ ಯೋಜನೆ ಸಿದ್ಧಪಡಿಸುವಿಕೆ ಸೇರಿ ವಿವಿಧ ಅಕ್ರಮ ನಡೆದಿರುವುದು ಹೊಸತಲ್ಲ. ಅದಕ್ಕೆ ಇನ್ನೊಂದು ಸೇರ್ಪಡೆ ಜೈಲಿನಿಂದ ಹೊರಬಂದ ಕೈದಿಯೊಬ್ಬರು ಜೈಲಿಗೆ ಫೋನ್ ಮಾಡಿ, ಅಲ್ಲಿರುವ ಇನ್ನಿತರ ಕೈದಿಗಳಿಗೆ ಸುಪಾರಿ ನೀಡಿದ ಪ್ರಕರಣ ಹೊರಬಿದ್ದಿದೆ. ಮುರುಡೇಶ್ವರದ ಜಯಂತ ನಾರಾಯಣ ನಾಯ್ಕ ಎಂಬಾತರು ಜೈಲಿನಿಂದ ಹೊರಗೆ ಹೋಗಿದ್ದು, ಅದರ ಬೆನ್ನಲ್ಲೇ ಕಾರವಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿರುವ ನಾಗೇಶ ರವಿ ಪೂಜಾರಿ, ಆನಂದ್, ಫೈರೋಜ್ ಯಾಸಿನ್ ಯರಗಟ್ಟಿ, ದೇವೇಂದ್ರ ನಾಗೇಶ ಸಿದ್ದಿ ಅವರಿಂದ ತಮಗೆ ಆಗದವರ ವಿರುದ್ಧ ಹಲ್ಲೆ ನಡೆಸಲು ಸುಪಾರಿ ನೀಡಿದ್ದಾರೆ. ಆ ಸುಪಾರಿಪಡೆದವರು ಎದುರಾಳಿ ಗುಂಪಿನ ಮೇಲೆ ದಾಳಿ ಮಾಡಿದ್ದು, ಆ ಪ್ರಕರಣದ ವಿಚಾರಣೆ ವೇಳೆ ಸುಪಾರಿಪಡೆದು ದಾಳಿ ನಡೆಸಿದ ಬಗ್ಗೆ ಜೈಲು ಅಧಿಕಾರಿಗಳಿಗೆ ಕಾಲ್ ರೆಕಾರ್ಡ ಸಿಕ್ಕಿದೆ.
ಜೈಲು ಕೈದಿಗಳು ತಮ್ಮ ಕುಟುಂಬಸ್ಥರು ಮತ್ತು ವಕೀಲರ ಜೊತೆ ಮಾತನಾಡಲು ಪ್ರಿಸನ್ ಕಾಲ್ ಸಿಸ್ಟಂ ಎಂಬ ಸಂಪರ್ಕ ವ್ಯವಸ್ಥೆ ಇದೆ. ತಮ್ಮ ಕುಟುಂಬಸ್ಥರ ನೋಂದಾಯಿತ ಮೊಬೈಲ್ ಸಂಖ್ಯೆಗಳಿಗೆ ಮಾತ್ರ ಕೈದಿಗಳು ನಿಗದಿತ ಸಮಯಮಿತಿಗೆ ಒಳಪಟ್ಟು ಕರೆ ಮಾಡಲು ಅವಕಾಶ ನೀಡಲಾಗಿದ್ದು, ಅಲ್ಲಿನ ಪ್ರತಿ ಕರೆಗಳೂ ರೆಕಾರ್ಡ್ ಆಗುತ್ತವೆ. ಮತ್ತು ಪರಿಶೀಲನೆಗೊಳಪಡುತ್ತವೆ. ಈ ನಿಯಮದಂತೆ ವಿಚಾರಣಾಧೀನ ಕೈದಿಯೊಬ್ಬನಿಗೆ ಆತನ ಕುಟುಂಬದ ನೋಂದಾಯಿತ ಸಂಖ್ಯೆಯಿAದ ಕರೆ ಸ್ವೀಕರಿಸಿ ಮಾತನಾಡಲು ಅವಕಾಶ ನೀಡಲಾಗಿತ್ತು. ಆದರೆ, ಆ ವೇಳೆ ಜಯಂತ್ ನಾಯ್ಕ ಕಾನರೆನ್ಸ್ ಕಾಲ್‌ನಲ್ಲಿದ್ದು, ಜೈಲಿಗೆ ಬರುವ ತಮ್ಮ ವಿರೋಧಿ ತಂಡದ ಮೇಲೆ ಹಲ್ಲೆ ನಡೆಸುವಂತೆ ಜೈಲಿನಲ್ಲಿದ್ದ ಕೈದಿಗೆ ಸೂಚಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಈ ಜಯಂತ್ ನಾಯ್ಕ ಸಹ ಪ್ರಕರಣವೊಂದರಲ್ಲಿ ಬಂಧಿತನಾಗಿ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದು, ಜೈಲಿನ ಒಳಗೆ ಇನ್ನಿತರ ಕೈದಿಗಳ ಜೊತೆ ಸ್ನೇಹ ಬೆಳಸಿ ಅವರ ಮೂಲಕ ಎದುರಾಳಿ ತಂಡದವರ ಮೇಲೆ ದಾಳಿ ನಡೆಸಲು ಸಂಚು ರೂಪಿಸಿರುವುದು ಇದೀಗ ಹೊರಬಿದ್ದಿದೆ.
ಮುರ್ಡೇಶ್ವರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವೊಂದರಲ್ಲಿ ಬಂಧತರಾಗಿ ಬಂದಿರುವ ಐದು ಜನರ ವಿಚಾರಣಾಧೀನ ಕೈದಿಗಳ ಮೇಲೆ ಹಲ್ಲೆ ನಡೆಸುವಂತೆ ಜಯಂತ ನಾಯ್ಕ ಜೈಲ್‌ನ ಹೊರಗಿನಿಂದಲೇ ಒಳಗಿರುವ ನಾಗೇಶ ಪೂಜಾರಿ, ಆನಂದ್, ಪೈರೋಜ್, ಹಾಗೂ ದೇವೇಂದ್ರ ಸಿದ್ದಿ ಎಂಬುವವರಿಗೆ ಸುಪಾರಿ ನೀಡಿದ್ದು, ಪ್ರಿಸನ್ ಕಾಲ್ ಸಿಸ್ಟಂನಲ್ಲಿ ಆರೋಪಿಗಳ ಮಾತುಕತೆ ದಾಖಲಾಗಿದೆ. ಅದರ ಆಧಾರದ ಮೇಲೆ ಜೈಲರ್ ಹೇಮವತಿ ಅವರು ಪೊಲೀಸ್ ದೂರು ನೀಡಿದ್ದಾರೆ. ಆ ದಾಖಲೆ ಆಧರಿಸಿ ತನಿಖೆ ನಡೆಯುತ್ತಿದೆ.