1980ರ ಅವಧಿಯಲ್ಲಿ ಶಿರಸಿಯಲ್ಲಿ ಕಳ್ಳತನ ಮಾಡಿಕೊಂಡು ಜೀವನ ನಡೆಸುತ್ತಿದ್ದ ಮಹಮದ್ ಯುಸೀಪ್ ನಂತರ ಉಡುಪಿಗೆ ಹೋಗಿ ಆಟೋ ಚಾಲಕನಾಗಿ ಬದುಕು ಕಟ್ಟಿಕೊಂಡಿದ್ದು, 46 ವರ್ಷಗಳ ನಂತರ ಪೊಲೀಸರು ಆ ಕಳ್ಳನನ್ನು ಮತ್ತೆ ಬಂಧಿಸಿದ್ದಾರೆ.
ಶಿರಸಿಯ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಮಹಮದ್ ಯುಸೀಪ್ ಅಬ್ದುಲ್ ರಹಮಾನ್ ಖಾಜಾ (68) ಅವರು 1980ರಲ್ಲಿ ಕುಖ್ಯಾತ ಕಳ್ಳರಾಗಿದ್ದರು. ಇಲ್ಲಿನ ಕೆ ಎಚ್ ಬಿ ಕಾಲೋನಿ ಸೇರಿ ಮೂರು ಕಡೆ ಅವರು ರಾತ್ರಿ ವೇಳೆ ಮನೆಗೆ ನುಗ್ಗಿದ್ದರು. ಮನೆಯಲ್ಲಿ ಸಿಕ್ಕ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಆ ವೇಳೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಮದ್ ಯುಸೀಪ್ ಅವರನ್ನು ಬಂಧಿಸಿದ್ದರು. ನ್ಯಾಯಾಲಯದಿಂದ ಜಾಮೀನುಪಡೆದು ಹೋಗಿದ್ದ ಮಹಮದ್ ಯುಸೀಪ್ ಆ ನಂತರ ಶಿರಸಿ ಕಡೆ ತಲೆ ಹಾಕಿರಲಿಲ್ಲ. ನ್ಯಾಯಾಲಯದಿಂದ ವಾರೆಂಟ್ ಜಾರಿಯಾದರೂ ಪೊಲೀಸರಿಗೆ ಸಿಗುತ್ತಿರಲಿಲ್ಲ.
ಉಡುಪಿ ಹೆರ್ಗದ ಪರ್ಕಳದಲ್ಲಿ ಮಹಮದ್ ಯುಸೀಪ್ ಹೊಸ ಜೀವನ ಕಟ್ಟಿಕೊಂಡಿದ್ದರು. ಅಲ್ಲಿ ಆಟೋ ಚಾಲಕನಾಗಿ ಅವರು ದುಡಿಯುತ್ತಿದ್ದರೂ ಅವರ ಮೇಲಿದ್ದ ಹಳೆಯ ಕೇಸುಗಳು ಹಾಗೇ ಇದ್ದವು. ಮಾರುವೇಷದಲ್ಲಿದ್ದ ಮಹಮದ್ ಯುಸೀಪ್ ಅವರನ್ನು ಹುಡುಕುವುದು ಪೊಲೀಸರಿಗೆ ಸವಾಲಾಗಿದ್ದರೂ ಹರಸಾಹಸದಿಂದ ಪೊಲೀಸರು ವಿವಿಧ ಮಾಹಿತಿ ಸಂಗ್ರಹಿಸಿದರು. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಶಿರಸಿ ಪೊಲೀಸ್ ಉಪಾಧೀಕ್ಷಕಿ ಗೀತಾ ಪಾಟೀಲ್ ಅವರು ಸೇರಿ ಹೇಗಾದರೂ ಮಾಡಿ ಮಹಮದ್ ಯುಸೀಪ್ ಅವರನ್ನು ಬಂಧಿಸುವ ಯೋಜನೆ ರೂಪಿಸಿದರು. ಶಿರಸಿ ಪಿಐ ಸಂಪತ್ ಈಸಿ, ಪಿಸೈ ಬಸವರಾಜ ಕನಶೆಟ್ಟಿ, ಗೀತಾ ಕಲಘಟಕಿ ಅವರ ಜೊತೆ ಪೊಲೀಸ್ ಸಿಬ್ಬಂದಿ ಅಶೋಕ ಹರಿಕಂತ್ರ, ಕೋಟೇಶ ನಾಗರವಳ್ಳಿ, ಸಂದೀಪ ನಿಂಬಾಯಿ, ರಾಕೇಶ ಎನ್ ಎಚ್, ಅರುಣ ಲಮಾಣಿ ಅವರ ತಂಡ ರಚಿಸಿದರು.
ಕಾರವಾರದ ಟೆಕ್ನಿಕಲ್ ಸೆಲ್’ನ ಬಬನ ಕದಂ, ಉದಯ ಗುನಗಾ, ಮಹಾಲಿಂಗ ಸಾವಳಗಿ ಸೇರಿ ತಾಂತ್ರಿಕ ಮಾಹಿತಿ ಆಧರಿಸಿ ಮಹಮದ್ ಯುಸೀಪ್ ಅವರ ಅಡಗುತಾಣ ಪತ್ತೆ ಮಾಡಿದರು. ಈ ಎಲ್ಲಾ ಪೊಲೀಸರು ಅಲ್ಲಿಗೆ ಹೋಗಿ ಮಹಮದ್ ಯುಸೀಪ್ ಅವರನ್ನು ಬಂಧಿಸಿದರು. ಸದ್ಯ ಮಹಮದ್ ಯುಸೀಪ್ ಅವರಿಗೆ ನ್ಯಾಯಾಲಯ ನ್ಯಾಯಾಂಗ ಬಂಧನವಿಧಿಸಿದೆ.