ಗೋಳಿಕಟ್ಟಾ ಗ್ರಾಮದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಸ್ಥೆಗೆ ಸೇರಿದ ಜಾಗದಲ್ಲಿ ರೈತರು ಬದುಕು ಕಟ್ಟಿಕೊಂಡಿದ್ದು, ಅರಣ್ಯಾಧಿಕಾರಿಗಳು ದಿಢೀರ್ ಕಾರ್ಯಾಚರಣೆ ನಡೆಸಿದ ಕ್ರಮವನ್ನು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಖಂಡಿಸಿದ್ದಾರೆ. ರಾತ್ರಿ ನೋಟಿಸ್ ನೀಡಿ ಬೆಳಗ್ಗೆ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ವಿರುದ್ಧ ಅವರು ಆಕ್ರೋಶವ್ಯಕ್ತಪಡಿಸಿದ್ದಾರೆ.
`ಗಲ್ಲು ಶಿಕ್ಷೆಗೆ ಒಳಗಾದವರಿಗೆ ಸಹ ಕೊನೆಯ ಆಸೆ ಹೇಳುವ ಅವಕಾಶವಿದೆ. ಆದರೆ, ಇಲ್ಲಿ ರೈತರಿಗೆ ಮೇಲ್ಮನವಿಗೆ ಸಹ ಸಮಯ ಕೊಡದೇ ಭೂಮಿ ವಶಕ್ಕೆಪಡೆಯಲಾಗಿದೆ’ ಎಂದವರು ಕಿಡಿಕಾರಿದ್ದಾರೆ. `ಈ ಚಟುವಟಿಕೆ ಪ್ರಜಾಪ್ರಭುತ್ವದ ವಿರೋಧಿ’ ಎಂದವರು ಹೇಳಿದ್ದಾರೆ. `ಗೋಳಿಕಟ್ಟಾ ಗ್ರಾಮದ ಕಾಮಧೇನು ಹಾಲು ಮತ್ತು ಹಣ್ಣು ಸಂಸ್ಕರಣಾ ಸಂಸ್ಥೆಗೆ ಸೇರಿದ ಜಾಗದಲ್ಲಿ ರೈತರು ಭತ್ತ, ಅನಾನಸ್ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆದು ಜೀವನ ನಡೆಸುತ್ತಿದ್ದಾರೆ. ಇಲ್ಲಿರುವ ರೈತರು ಬೇರೆ ದೇಶದವರಲ್ಲ. ಅವರು ಕಂದಾಯ ಪಾವತಿ ಮಾಡುತ್ತಿದ್ದು, ಹೀಗಿರುವಾಗ ಆ ರೈತರ ಮೇಲೆ ದೌರ್ಜನ್ಯ ನಡೆಸಿದ್ದು ಸರಿಯಲ್ಲ’ ಎಂದವರು ಹೇಳಿದ್ದಾರೆ.
`ಈ ಸಂಸ್ಥೆಗೆ ಸಂಬAಧಿಸಿದ ಜಾಗದ ಕುರಿತು ನ್ಯಾಯಾಲಯದಲ್ಲಿ ಬಂದ ಆದೇಶ ಗೌರವಿಸುವುದು ಸರಿ. ಆದರೆ, ಜಾಗ ಖುಲ್ಲಾಪಡಿಸಲು ಕಾನೂನಿನ ನಿಯಮ ಪಾಲಿಸಬೇಕು. ರೈತರಿಗೆ ಕಾಲವಕಾಶ ಹಾಗೂ ಮಾಹಿತಿ ನೀಡದೇ ದಿಢೀರ್ ಆಗಿ ಕಾರ್ಯಾಚರಣೆ ನಡೆಸಿದ್ದು ಸರಿಯಲ್ಲ. ಈ ಕೃತ್ಯದ ಹಿಂದೆ ದೊಡ್ಡ ಹುನ್ನಾರವಿದೆ’ ಎಂದವರು ದೂರಿದ್ದಾರೆ.