ಯಲ್ಲಾಪುರದ ಕಾಡುಗಳಲ್ಲಿ ವಿದೇಶಿ ವ್ಯಕ್ತಿಯೊಬ್ಬ ಅಲೆದಾಡುತ್ತಿದ್ದು, ಆತನ ವಿಚಿತ್ರ ವರ್ತನೆ ನೋಡಿದ ಜನ ಕಂಗಾಲಾಗಿದ್ದಾರೆ. ಭಾಷೆ ಬಾರದ ವಿದೇಶಿಗ ವಿಚಿತ್ರವಾಗಿ ನಡೆದುಕೊಂಡಿದ್ದು, ಕೊನೆಗೆ ಊರಿನವರೆಲ್ಲರೂ ಸೇರಿ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಉತ್ತರ ಯುರೋಪ್ ಭಾಗದ ಡೆನ್ ಮಾರ್ಕ ದೇಶದ ಆರಿಕ್ (೫೬) ಎಂಬಾತರು ಆರು ತಿಂಗಳ ಕಾಲ ವಿದೇಶ ಪ್ರವಾಸಕ್ಕೆ ನಿರ್ಧರಿಸಿದ್ದರು. ಡೆನ್ ಮಾರ್ಕನ ಒಂದು ರೂಪಾಯಿಗೆ ಭಾರತದಲ್ಲಿ ೧೫ ರೂಪಾಯಿಯ ಮೌಲ್ಯವಿದ್ದು, ತಮ್ಮಲ್ಲಿರುವ ಹಣದಲ್ಲಿ ಪ್ರವಾಸ ಮಾಡಲು ಭಾರತವೇ ಸೂಕ್ತ ಎಂದವರು ನಿರ್ಧರಿಸಿದ್ದರು. ಇದಕ್ಕಾಗಿ ಅವರು ಆರು ತಿಂಗಳ ಅವಧಿಗೆ ವೀಸಾಪಡೆದಿದ್ದರು. ಡೆನ್‌ಮಾರ್ಕಿನಿಂದ ತಮಿಳುನಾಡಿಗೆ ಬಂದಿದ್ದ ಅವರು ಅಲ್ಲಿ-ಇಲ್ಲಿ ಸುತ್ತಾಡಿ ಗೋವಾಗೆ ಬಂದಿದ್ದರು. ತಮ್ಮಲ್ಲಿರುವ ಹಣ ಕಡಿಮೆ ಆದಾಗ ಗೋವಾ ಬಿಟ್ಟು ಕರ್ನಾಟಕ ಪ್ರವೇಶಿಸಿದರು. ಯಲ್ಲಾಪುರದ ಮಾಗೋಡು ಜಲಪಾತದ ಬಗ್ಗೆ ಅರಿವ ಅವರು ಅದನ್ನು ನೋಡಲು ಹೋಗಿದ್ದು, ಯಲ್ಲಾಪುರದಲ್ಲಿಯೇ ಅವರ ಬಳಿಯಿದ್ದ ಎಲ್ಲಾ ಹಣ ಖಾಲಿಯಾಯಿತು. ಮೊಬೈಲ್ ಸಹ ಬಿದ್ದು ಹಾಳಾಯಿತು.
ಕೈಯಲ್ಲಿ ದುಡ್ಡಿಲ್ಲದ ಆರಿಕ್ ಅವರಿಗೆ ಇಲ್ಲಿನ ಭಾಷೆ ಬರುತ್ತಿರಲಿಲ್ಲ. ಹಸಿವಾದರೂ ಜನರಲ್ಲಿ ಬೇಡಿ ತಿನ್ನಲು ಮನಸ್ಸು ಬರಲಿಲ್ಲ. ಹೀಗಾಗಿ ಮಾಗೋಡು ಬದಿಯ ಕಾಡು ದಾರಿಯಲ್ಲಿ ಸಂಚರಿಸಿದ ಅವರು ಗುಡ್ಡಗಾಡಿನ ಹಣ್ಣುಗಳಿಗಾಗಿ ಹುಡುಕಾಟ ನಡೆಸಿದರು. ನಾಲ್ಕು ದಿನಗಳ ಕಾಲ ಓಡಾಟ ನಡೆಸಿದರೂ ಆ ಬೆಟ್ಟದಲ್ಲಿ ನೀರು ಬಿಟ್ಟು ಅವರಿಗೆ ಬೇರೆನೂ ಸಿಗಲಿಲ್ಲ. ರಾತ್ರಿ ವೇಳೆ ಕಂಡ ಬೆಳಕು ನೋಡಿ ಅವರು ಊರಿನ ಕಡೆ ಆಗಮಿಸಿದ್ದು, ಮಾಗೋಡು ಕಾಲೋನಿ ತಲುಪಿದರು. ಹಸಿವಿನಿಂದ ಬಳಲಿದ್ದ ಆರಿಕ್ ಅವರು ಅಲ್ಲಿ ವಿಚಿತ್ರವಾಗಿ ವರ್ತಿಸುತ್ತಿದ್ದರು. ಜನ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಿದರೂ ಅದಕ್ಕೆ ಸ್ಪಂದಿಸದೇ ಮಾನಸಿಕ ರೋಗಿಯಂತೆ ವರ್ತಿಸಿದರು.
ಇದನ್ನು ನೋಡಿದ ಜನ ಪೊಲೀಸರಿಗೆ ಫೋನ್ ಮಾಡಿದರು. ಪೊಲೀಸ್ ಸಿಬ್ಬಂದಿ ಬಳಿಯೂ ಆರಿಕ್ ಅವರ ಸಮಸ್ಯೆ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಹೀಗಾಗಿ ಅವರನ್ನು ನೇರವಾಗಿ ಪೊಲೀಸ್ ಠಾಣೆಗೆ ಕರೆತಂದರು. ಪಿಸೈ ರಾಜಶೇಖರ್ ವಂದಲಿ ಅವರು ಆರಿಕ್ ಅವರ ಪೂರ್ವಾಪರ ವಿಚಾರಿಸಿದರು. ವೀಸಾ ಅವಧಿ ಇನ್ನೂ ಚಾಲನೆಯಲ್ಲಿರುವುದನ್ನು ಗಮನಿಸಿದರು. ಹಸಿದ ಹೊಟ್ಟೆಗೆ ಊಟ ಕೊಡಿಸಿ, ಕೈಯಲ್ಲಿ ಒಂದಷ್ಟು ಕಾಸು ಹಿಡಿಸಿದರು. ಅದಾದ ನಂತರ ಮತ್ತೆ ಮುಂದಿನ ಪ್ರವಾಸಕ್ಕೆ ಹೋಗಲು ಬಯಸಿದ ಆರಿಕ್ ಅವರನ್ನು ಬಸ್ ಹತ್ತಿಸಿ ಕಳುಹಿಸಿಕೊಟ್ಟರು.