ಅರಬೈಲ್ ಘಟ್ಟ ಪ್ರದೇಶದ ಮೂಲೆಪಾಲ್ ಬಳಿ ವ್ಯಕ್ತಿಯೊಬ್ಬರ ಕೊಲೆ ನಡೆದಿದ್ದು, ಕೊಡ್ಲಗದ್ದೆಯ ರವಿ ಸಿದ್ದಿ ಅವರು ಈ ಶವ ನೋಡಿ ಪೊಲೀಸರಿಗೆ ಹೇಳಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಸೇರಿ ಅನೇಕ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಅಗಸ್ಟ 12ರ ರಾತ್ರಿ ದುಷ್ಕರ್ಮಿಗಳು ಅಪರಿಚಿತರೊಬ್ಬರನ್ನು ಅಪಹರಿಸಿಕೊಂಡು ಬಂದು ಕೊಲೆ ಮಾಡಿರುವ ಶಂಕೆವ್ಯಕ್ತವಾಗಿದೆ. ಶವದ ಮೇಲೆ ಬಾಸುಂಡೆ ಗುರುತು ಹಾಗೂ ಅಲ್ಲಲ್ಲಿ ಗಾಯಗಳು ಕಾಣಿಸಿವೆ. ಸಾವನಪ್ಪಿದ ವ್ಯಕ್ತಿಯ ಮೂಗಿನಿಂದ ರಕ್ತ ಸುರಿದಿದ್ದು, ಸಾವನಪ್ಪಿದ ವ್ಯಕ್ತಿ ಯಾರು? ಕೊಲೆ ಮಾಡಿದ ದುರುಳರು ಯಾರು? ಎಂದು ಗೊತ್ತಾಗಿಲ್ಲ. ಸಾವನಪ್ಪಿದ ವ್ಯಕ್ತಿಯ ವಯಸ್ಸು 26 ಎಂದು ಅಂದಾಜಿಸಲಾಗಿದೆ.
ಕೊಡ್ಲಗದ್ದೆಯ ರವಿ ಕೃಷ್ಣ ಸಿದ್ದಿ ಅವರು ಗುರುವಾರ ರೇಶನ್ ತರುವುದಕ್ಕಾಗಿ ಯಲ್ಲಾಪುರಕ್ಕೆ ಹೊರಟಿದ್ದರು. ಅಂಗಡಿಬೈಲಿನಿoದ ಬಸ್ಸು ನೋಡಿದ ಅವರು ಗುಳ್ಳಾಪುರದಲ್ಲಿ ಆ ಬಸ್ಸು ಹತ್ತಿದರು. ಬಸ್ಸಿನ ಚಾಲಕನ ಆಸನದ ಪಕ್ಕದಲ್ಲಿಯೇ ಅವರು ಕೂತಿದ್ದರು. ಆ ಬಸ್ಸು ಅರಬೈಲ್ ಘಟ್ಟ ಪ್ರವೇಶಿಸಿದ್ದು, ಮೂಲೆಪಾಲ್ ಗಟಾರದಲ್ಲಿ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ರವಿ ಸಿದ್ದಿ ಅವರು ನೋಡಿದರು. ತಕ್ಷಣ ಬಸ್ ನಿಲ್ಲಿಸುವಂತೆ ಮನವಿ ಮಾಡಿ, ಆ ವ್ಯಕ್ತಿಯ ಹತ್ತಿರ ಹೋದರು. ಆ ವ್ಯಕ್ತಿಯ ಮೂಗಿನ ಬಳಿ ಕೈ ಹಿಡಿದು ನೋಡಿದಾಗ ಉಸಿರಾಡುತ್ತಿರಲಿಲ್ಲ.
ಅಪರಿಚಿತ ಶವವನ್ನು ಗಮನಿಸಿದ ರವಿ ಸಿದ್ದಿ ಅವರಿಗೆ ಮೈಮೇಲೆ ಬಾಸುಂಡೆ ಕಂಡವು. ದೇಹದಲ್ಲಿ ಅನೇಕ ಗಾಯಗಳಿದ್ದವು. ಎದೆ ಹಾಗೂ ಹೊಟ್ಟೆಯ ಚರ್ಮ ಕಿತ್ತಿರುವುದನ್ನು ಅವರು ಗಮನಿಸಿದರು. ಅಪರಿಚಿತ ವ್ಯಕ್ತಿಯನ್ನು ಅಪರಿಚಿತರು ಕೊಲೆ ಮಾಡಿರುವ ಬಗ್ಗೆ ಅವರಿಗೆ ಅನುಮಾನ ಮೂಡಿದ್ದು, ಅದೇ ಅನುಮಾನದಲ್ಲಿ ಯಲ್ಲಾಪುರಕ್ಕೆ ಬಂದರು. ರೇಶನ್‌ಪಡೆದು ಅದನ್ನು ಮನೆಗೆ ಮುಟ್ಟಿಸಿದ ನಂತರ ಮತ್ತೆ ಪೇಟೆಗೆ ಬಂದು ಪೊಲೀಸ್ ಠಾಣೆಗೆ ಹೋಗಿ ತಾವು ನೋಡಿದ ಎಲ್ಲಾ ವಿಷಯ ವಿವರಿಸಿದರು.
ಪಿಐ ರಮೇಶ ಹಾನಾಪುರ, ಪಿಸೈ ರಾಜಶೇಖರ ವಂದಲಿ, ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರು ಸ್ಥಳಕ್ಕೆ ಆಗಮಿಸಿದರು. ಸಾವನಪ್ಪಿದ ವ್ಯಕ್ತಿ ಯಾರು? ಯಾವ ಉದ್ದೇಶಕ್ಕೆ ಆತನ ಸಾವಾಯಿತು? ಎನ್ನುವುದರ ಬಗ್ಗೆ ಪೊಲೀಸರು ತನಿಖೆ ಶುರು ಮಾಡಿದ್ದಾರೆ.