ಕಿಸೆಯಲ್ಲಿ ಸರಿಯಾಗಿ 100ರೂ ಇಲ್ಲದಿದ್ದರೂ ಜೂಜಾಡಲು ಹೋಗಿದ್ದ ಐದು ಜನ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಚಾಲಕ, ಕಾರ್ಮಿಕ, ಮೀನು ವ್ಯಾಪಾರಿ ಜೊತೆ ಖಾಸಗಿ ಕೆಲಸ ಮಾಡಿಕೊಂಡಿರುವವರು ಅಂದರ್ ಬಾಹರ್ ವ್ಯಾಮೋಹಕ್ಕೆ ಬಿದ್ದಿದ್ದು, ಅವರೆಲ್ಲರಿಗೂ ಪೊಲೀಸರು ಬುದ್ದಿ ಹೇಳಿ ಕಳುಹಿಸಿದ್ದಾರೆ.
ಯಲ್ಲಾಪುರದ ಕಿರವತ್ತಿ ಇಂದಿರಾನಗರದ ಮಹಮದ್ ಯುಸೋಪ್ ಜಮಾಲ್ ಶೇಖ್ (33) ಅವರು ಮೀನು ವ್ಯಾಪಾರ ಮಾಡಿಕೊಂಡಿದ್ದಾರೆ. ಹೊಸಳ್ಳಿಯ ರಾಜು ಗಂಗಾದರ ಕರಾಡೆ (47) ಅವರು ಚಾಲಕರಾಗಿದ್ದಾರೆ. ಹೊಸಳ್ಳಿಯ ಮಾರುತಿ ಬರ್ಮಣ್ಣ ಕಾಂಬಳೆ (55) ಅವರು ಖಾಸಗಿ ಕೆಲಸದಲ್ಲಿದ್ದಾರೆ. ಅದರೊಂದಿಗೆ ಹುಣಸಗಿರಿ ಪಾನಿಗುಂಡಿಯ ಮಂಜುನಾಥ ಸಿದ್ಧಪ್ಪ ಹುಡೇದ್ (24) ಹಾಗೂ ಕಿರವತ್ತಿ ಜಯಂತನಗರದ ಲಕ್ಷ್ಮಣ ಪಾರ್ವತಮ್ಮ ಬೆಂಗೇರಿ (33) ಅವರು ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಅವರೆಲ್ಲರೂ ಸೇರಿ 750ರೂ ಹಣ ಒಗ್ಗೂಡಿಸಿ ಅಂದರ್ ಬಾಹರ್ ಆಟ ಆಡಿದ್ದಾರೆ.
ಕಿರವತ್ತಿ ಗ್ರಾಮದ ದೊಡ್ಡಯಲವಳ್ಳಿ ರಸ್ತೆಯ ಶ್ರೀ ಆಂಜಿನೇಯ ದೇವಸ್ಥಾನದ ಎದುರು ರಸ್ತೆಯಲ್ಲಿ ಈ ಐದು ಜನ ಸೇರಿದ್ದಾರೆ. ಅಲ್ಲಿಯೇ ಕುಳಿತು ಎಲ್ಲರೂ ಹಣ ಹೂಡಿಕೆ ಮಾಡಿ, ಇಸ್ಪಿಟ್ ಆಟ ಶುರು ಮಾಡಿದ್ದಾರೆ. ಆ ಹಣವನ್ನು ಪಂಥವಾಗಿ ಕಟ್ಟಿ ಒಬ್ಬರಿಗೆ ಲಾಭ ಹಾಗೂ ಮತ್ತೊಬ್ಬರಿಗೆ ಹಾನಿ ಆಗುವ ರೀತಿಯಲ್ಲಿ ಜೂಜಾಟ ನಡೆಸಿದ್ದಾರೆ. ಈ ಮಾಹಿತಿ ಅರಿತ ಪಿಸೈ ರಾಜಶೇಖರ ವಂದಲಿ ಅವರು ಅಲ್ಲಿ ದಾಳಿ ನಡೆಸಿದ್ದು, ಆ ಎಲ್ಲರೂ ಸಿಕ್ಕಿಬಿದ್ದಿದ್ದಾರೆ. ಜೂಜಾಟದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಪೊಲೀಸರು ಅವರಿಗೆ ತಿಳುವಳಿಕೆ ಮೂಡಿಸಿದ್ದಾರೆ. ಅದರೊಂದಿಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತವಾಗಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.