ಜಮಗುಳಿಯಲ್ಲಿ ವಾಸವಾಗಿದ್ದ ಶಾರದಾ ಗಾವಡೆ ಅವರಿಗೆ ವಿಷ ಸರ್ಪ ಕಚ್ಚಿದೆ. ಇನ್ನೂ ಬಾಳಿ ಬದುಕಬೇಕಿದ್ದ ಅವರು 52ನೇ ವಯಸ್ಸಿನಲ್ಲಿಯೇ ಸಾವನಪ್ಪಿದ್ದಾರೆ.
ಯಲ್ಲಾಪುರದ ಕಣ್ಣಿಗೇರಿ ಗ್ರಾ ಪಂ ವ್ಯಾಪ್ತಿಗೆ ಒಳಪಡುವ ಜಮಗುಳಿಯಲ್ಲಿ ಶಾರದಾ ಪ್ರಕಾಶ ಗಾವಡೆ ಅವರು ವಾಸವಾಗಿದ್ದರು. ಕೃಷಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಅವರು ಬದುಕು ಕಟ್ಟಿಕೊಂಡಿದ್ದರು. ಜುಲೈ 23ರ ನಸುಕಿನ 5 ಗಂಟೆ ವೇಳೆಗೆ ಅವರು ಮೂತ್ರ ವಿಸರ್ಜನೆಗಾಗಿ ಮನೆ ಹಿಂದೆ ಹೋಗಿದ್ದರು. ಅಲ್ಲಿಯೇ ಅಡಗಿ ಕುಳಿತಿದ್ದ ವಿಷ ಸರ್ಪ ಶಾರದಾ ಅವರ ಕಾಲಿಗೆ ಕಚ್ಚಿತು. ಎರಡು ಬೆರಳುಗಳಿಗೆ ಹಾವಿನ ಹಲ್ಲು ತಾಗಿತು.
ಹಾವು ಕಚ್ಚಿ ಅಸ್ವಸ್ಥರಾದ ಶಾರದಾ ಗಾವಡೆ ಅವರನ್ನು ತಕ್ಷಣ ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು. ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಕುಟುಂಬದವರು ಹಳಿಯಾಳ ಆಸ್ಪತ್ರೆಗೆ ಕರೆದೊಯ್ದರು. ಅದಾದ ನಂತರ ಅಲ್ಲಿಂದ ಧಾರವಾಡದ ಆಸ್ಪತ್ರೆಗೆ ದಾಖಲಿಸಿದರು. ಧಾರವಾಡ ಆಸ್ಪತ್ರೆ ವೈದ್ಯರು ಹುಬ್ಬಳ್ಳಿಗೆ ಕರೆದೊಯ್ಯುವಂತೆ ಸೂಚಿಸಿದ್ದು, ಅಗಸ್ಟ 5ರಂದು ಹುಬ್ಬಳ್ಳಿ ಆಸ್ಪತ್ರೆ ತಲುಪುವುದರೊಳಗೆ ಶಾರದಾ ಗಾವಡೆ ಅವರು ಕೊನೆಯುಸಿರೆಳೆದಿದ್ದರು.
ಬೆಂಗಳೂರಿನ ಬಿಎಂಟಿಸಿಯಲ್ಲಿ ಕೆಲಸ ಮಾಡುವ ಯಶವಂತ ಪ್ರಕಾಶ ಗಾವಡೆ ಅವರು ಈ ಬಗ್ಗೆ ಮಾಹಿತಿ ನೀಡಿ, ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.