25 ವರ್ಷಗಳಿಂದ ನಿರಂತರವಾಗಿ ಸೋಳಹ ಸೋಮವಾರ ವ್ರತ ಆಚರಿಸಿಕೊಂಡು ಬಂದಿದ್ದ ಶಿವಭಕ್ತೆ, ಹಳಿಯಾಳದ ಪಾರ್ವತಿ ಲಕ್ಷ್ಮಣ ಮರಾಠೆ ಅವರು ಸಾವನಪ್ಪಿದ್ದಾರೆ. ತಮ್ಮ 95ನೇ ವಯಸ್ಸಿನಲ್ಲಿ ಅವರು ಈ ಲೋಕದ ಯಾತ್ರೆ ಮುಗಿಸಿದ್ದಾರೆ.
ಪರಶಿವನ ಭಕ್ತರಾಗಿದ್ದ ಪಾರ್ವತಿ ಮರಾಠೆ ಅವರು ಅತ್ಯಂತ ಕಠಿಣವಾದ ಸೋಳಹ ಸೋಮವಾರ ವ್ರತ ಮಾಡಲು ನಿರ್ಧರಿಸಿದ್ದರು. ಸತತ 25 ವರ್ಷಗಳ ಕಾಲ ಅದನ್ನು ಭಕ್ತಿಯಿಂದ ಆಚರಿಸಿಕೊಂಡು ಬಂದಿದ್ದರು. ಶಿವಭಕ್ತಿ, ಧಾರ್ಮಿಕ ನಿಷ್ಠೆ ಹಾಗೂ ಸರಳ ಜೀವನಶೈಲಿಯಿಂದಾಗಿ ಆಸ್ತಿಕರ ವಲಯದಲ್ಲಿ `ಶಿವಶರಣೆ’ ಎಂದೇ ಅವರು ಗುರುತಿಸಿಕೊಂಡಿದ್ದರು. ಅವರ ದೈವಿಕ ಹಾಗೂ ಆಧ್ಯಾತ್ಮಿಕ ಜೀವನದ ಪ್ರಭಾವದಿಂದಾಗಿ ಅವರು ವಾಸವಿದ್ದ ಮನೆಗೆ ದೈವಿಕ ಪರಂಪರೆಯ ಅನುಯಾಯಿಗಳು ನಿರಂತರವಾಗಿ ಭೇಟಿ ನೀಡಿ ದೀಪ ಬೆಳಗಿಸುವ ಸಂಪ್ರದಾಯ ಬೆಳೆಸಿಕೊಂಡಿದ್ದರು.
ಸೆಪ್ಟೆಂಬರ್ 26ರ ರಾತ್ರಿ ಪಾರ್ವತಿ ಮರಾಠೆ ಅವರು ಕೊನೆಯುಸಿರೆಳೆದರು. ಬೆಂಗಳೂರಿನ ಗೋಸಾಯಿ ಮಠದ ಮರಾಠಾ ಸಮಾಜದ ಜಗದ್ಗುರು ವೇದಾಂತಾಚಾರ್ಯ ಮಂಜುನಾಥ ಭಾರತಿ ಸ್ವಾಮೀಜಿಗಳು ತಮ್ಮ ಶೋಕ ಸಂದೇಶದಲ್ಲಿ ಶಿವಶರಣೆ ಪಾರ್ವತಿ ಅಮ್ಮನವರ ಅಗಲಿಕೆಗೆ ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿ ಕೋರಿ `ಕುಟುಂಬಸ್ಥರಿಗೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ’ ಎಂದು ಪ್ರಾರ್ಥಿಸಿದ್ದಾರೆ. ಕಬ್ಬು ಬೆಳೆಗಾರರ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎನ್ ಸ್ ಜಿವೋಜಿ, ಪ್ರಾಕ್ಸಿನ್ ಟೆಕ್ ಫ್ರೈ ಲಿ ಎಂಡಿ ನಾರಾಯಣ್ ಟೊಸೂರ್, ಕರವೇ ತಾಲೂಕ ಅಧ್ಯಕ್ಷ ಬಸವರಾಜ ಬೆಂಡಿಗೇರಿಮಠ, ಜಿಜಾ ಮಾತಾ ಮಹಿಳಾ ಮಂಡಳ ಅಧ್ಯಕ್ಷೆ ಮಂಗಳಾ ಕಶೀಲ್ಕರ್, ಕಸಾಪ ತಾಲೂಕ ಅಧ್ಯಕ್ಷೆ ಸುಮಂಗಲಾ ಅಂಗಡಿ, ಪುರಸಭೆ ಮಾಜಿ ಅಧ್ಯಕ್ಷ ಉಮೇಶ್ ಬೋಳಶೆಟ್ಟಿ, ವ್ಯಾಪಾರಸ್ಥರ ಸಂಘದ ಸಚಿನ್ ಹಳ್ಳಿಕೇರಿ, ವಿವಿಧ ಸಂಘಟನೆಗಳ ಪ್ರಮುಖರಾದ ಪೂಜಾ ಧೂಳಿ, ಜಿ ಡಿ ಗಂಗಾಧರ, ರವಿ ತೋರಣಗಟ್ಟಿ ಅನೇಕರು ತಮ್ಮ ಸಂತಾಪ ಸೂಚಿಸಿದ್ದಾರೆ.
ಹಳಿಯಾಳ ಶಾಸಕ ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್ ವಿ. ದೇಶಪಾಂಡೆ ಮತ್ತು ಮಾಜಿ ಶಾಸಕ ಸುನಿಲ್ ಹೆಗಡೆ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ ಅಗಲಿದ ಹಿರಿಯ ಜೀವಕ್ಕೆ ಶ್ರದ್ಧಾಂಜಲಿ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.