ಅಂಕೋಲಾಗೆ ಮಾತ್ರ ಸೀಮಿತವಾಗಿದ್ದ ನಕಲಿ ಆಧಾರ್ ಕಾರ್ಡ ಸಿದ್ಧಪಡಿಸುವ ದಂಧೆ ಭಟ್ಕಳಕ್ಕೂ ವಿಸ್ತರಣೆಯಾಗಿದೆ. ಸತ್ತವರ ಹೆಸರಿನಲ್ಲಿ ಆಧಾರ್ ಕಾರ್ಡ ಸಿದ್ಧಪಡಿಸಿ ಇಲ್ಲಿಯೂ ಭೂಮಿ ಮಾರಾಟ ನಡೆದಿದೆ.
ನಕಲಿ ಆಧಾರ್ ಕಾರ್ಡ ಸಿದ್ಧಪಡಿಸಿ ನಕಲಿ ವ್ಯಕ್ತಿಗಳ ಮೂಲಕ ಜಮೀನು ಮಾರಾಟ ಮಾಡಿಸುವ ದಂಧೆ ಅಂಕೋಲಾದಲ್ಲಿ ಜೋರಾಗಿತ್ತು. ಇಂಥ ಪ್ರಕರಣವೊಂದರ ದೂರು ಸ್ವೀಕರಿಸಿದ ಪೊಲೀಸರು ನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ಸೇರಿ ಐವರನ್ನು ಬಂಧಿಸಿದ್ದರು. ಮತ್ತೊಂದು ಪ್ರಕರಣದಲ್ಲಿ ತಹಶೀಲ್ದಾರ್ ನಿಶ್ಚಲ್ ನರೋನಾ ಅವರು ದಸ್ತಾವೇಜು ನೋಂದಣಿ ರದ್ಧು ಮಾಡಿದ್ದರು. ಅದಾಗಿಯೂ, ಇನ್ನೂ ಅನೇಕ ಪ್ರಕರಣಗಳಿರುವ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಅದರ ಬೆನ್ನಲ್ಲೆ ಇದೀಗ ಭಟ್ಕಳದಲ್ಲಿಯೂ ಸಾವನಪ್ಪಿದ ವ್ಯಕ್ತಿ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ ಸಿದ್ಧಪಡಿಸಿ ಭೂಮಿ ದಸ್ತಾವೇಜು ನಡೆದ ಪ್ರಕರಣ ಹೊರಬಿದ್ದಿದೆ.
ಭಟ್ಕಳ ಗುಡ್ ಲಕ್ ರಸ್ತೆಯ ಅಬುಉಬೈದಾ ಮಸೀದಿ ಬಳಿ ವಾಸಿಸುವ ನಸ್ರೀನ್ ಹನೀಪ್ ಶೇಖ್ ಅವರ ಕುಟುಂಬದ ಆಸ್ತಿ ಅನ್ಯರ ಪಾಲಾಗಿದೆ. ಕೇರಳ ಮೂಲದ ವ್ಯಕ್ತಿಯೊಬ್ಬರು ನಸ್ರೀನ್ ಅವರ ಕುಟುಂಬದ ಭೂಮಿಯನ್ನು ಖರೀದಿಸಿ ನಂತರ ಸ್ಥಳೀಯರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಜೊತೆಗೆ ಆ ಭೂಮಿಯ ಮೇಲೆ 75 ಲಕ್ಷ ರೂ ಸಾಲವನ್ನುಪಡೆದಿದ್ದಾರೆ. ಮಾವಳ್ಳಿ ಗ್ರಾಮದ 602*1ರಲ್ಲಿ ನಸ್ರೀನ್ ಕುಟುಂಬದವರಿಗೆ 13ಗುಂಟೆ ಭೂಮಿಯಿದ್ದು, ಅದೇ ಭೂಮಿ ಕೇರಳದ ದೇವಶಿಸ್ ಎಂ ಎಂಬಾತರ ಹೆಸರಿಗೆ ನೋಂದಣಿ ಆಗಿದೆ. ಅದಾದ ನಂತರ ಮತ್ತೆ ಅದೇ ಭೂಮಿ ಮಾವಳ್ಳಿಯ ಚರ್ಚ ರಸ್ತೆಯ ಚಂದ್ರಹಿತ್ಲ ಬಳಿಯ ಹೆಲನ್ ಪ್ರಾನ್ಸಿಸ್ ಗೋಮ್ಸ್ ಎಂಬಾತರ ಹೆಸರಿಗೆ ನೋಂದಣಿ ಮಾಡಲಾಗಿದೆ. ಈ ಎರಡೂ ನೋಂದಣಿಗೆ ನಕಲಿ ಆಧಾರ್ ಕಾರ್ಡ ಬಳಕೆ ಆಗಿದೆ.
ಈ ಭೂ ಅಕ್ರಮದಲ್ಲಿ ಭಟ್ಕಳ ಯಲ್ವೋಡಾಕೂರಿನ ಮಹಮದ್ ಎಬಿ ಇಬ್ರಾಹಿಂ, ನಾಗಪ್ಪ ನಾಯ್ಕ ರಸ್ತೆಯ ಬಿಜಿ ಉಲ್ಲಾ ಭಾಷಾ ಸಾಬ್ ಖಾಜಾ, ಮಾವಳ್ಳಿ-2 ದೇವಗಿರಿಯ ಪಾವ್ಲು ಸಾಲ್ವಧರ್ ಲುಯಿಸ್, ಹೊನ್ನಾವರ ಹಿರಾಳಿಯ ರಾಮಾ ನರಸಿಂಹ ನಾಯ್ಕ, ಮುರುಡೇಶ್ವರ ಮಾವಳ್ಳಿ ಬಳಿಯ ಸುನೀಲ್, ಮುರುಡೇಶ್ವರದ ಜಯಂತ್, ಮುರುಡೇಶ್ವರದ ಕೃಷ್ಣ, ಭಟ್ಕಳದ ಜಲಾನಿ, ಮುರುಡೇಶ್ವರದ ಲಕ್ಷಣ ನಾಗಪ್ಪ ಹರಿಕಂತ್ರ, ಮುರುಡೇಶ್ವರದ ಹಶಮ್ ಅಲ್ಲಾರೆ ಅವರು ಭಾಗಿಯಾಗಿದ್ದಾರೆ. ನಕಲಿ ದಾಖಲೆ ನೀಡಿ ನೋಂದಣಿ ಮಾಡಿದ ಭೂಮಿಯ ಮೇಲೆ ಹೊನ್ನಾವರದ ಕೆನರಾ ಮೈನಾರಿಟಿ ಕೋ ಆಪರೇಟಿವ ಸೊಸೈಟಿ ಸಾಲ ನೀಡಿದೆ. ಬಣಸಾಲೆ ಶಾಖೆಯ ಮೂಲಕ 75 ಲಕ್ಷ ರೂ ಸಾಲ ವಿತರಣೆಯಾಗಿದೆ.
ನಕಲಿ ದಾಖಲೆ ನೀಡಿ ಭೂಮಿಪಡೆದ ವಂಚಕರು ತಮ್ಮನ್ನು ಭೂ ಮಾರಾಟಗಾರರ ಕುಟುಂಬದವರು ಎಂದು ಬಿಂಬಿಸಿಕೊAಡಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ನಸ್ರೀನ್ ಅವರು ಕುಟುಂಬದವರ ಜೊತೆ ಚರ್ಚಿಸಿ, ಪೊಲೀಸ್ ದೂರು ನೀಡಿದ್ದಾರೆ.