ಉತ್ತರ ಕನ್ನಡ ಜಿಲ್ಲೆಗೆ ಚಂಡಮಾರುತ ಅಪ್ಪಳಿಸಿದರೆ ಏನು ಮಾಡುವುದು? ಎನ್ನುವುದರ ಬಗ್ಗೆ ಡೀಸಿ ಕೆ ಲಕ್ಷ್ಮೀಪ್ರಿಯಾ ಅವರು ಯೋಚಿಸಿದ್ದಾರೆ. ಚಂಡಮಾರುತ ಹಾಗೂ ಅದರಿಂದ ಉಂಟಾಗಬಹುದಾದ ವಿಪತ್ತುಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಅಣಕು ಕಾರ್ಯಾಚರಣೆ ನಡೆಸಲು ಅವರು ನಿರ್ಧರಿಸಿದ್ದಾರೆ.
ಅಕ್ಟೊಬರ್ 1ರಂದು ಉತ್ತರ ಕನ್ನಡ ಜಿಲ್ಲೆಗೂ ಚಂಡಮಾರುತ ಅಪ್ಪಳಿಸಿದೆ ಎಂದು ಭಾವಿಸಿ ಜಿಲ್ಲಾಡಳಿತ ಅಣಕು ಕಾರ್ಯಾಚರಣೆ ನಡೆಸಲಿದೆ. `ಅಂತಾರಾಜ್ಯ ಮಟ್ಟದ ಅಣಕು ಕಾರ್ಯಾಚರಣೆ ಇದಾಗಿದ್ದು, ಯಾವುದೇ ಲೋಪಗಳಿಗೆ ಆಸ್ಪದ ನೀಡದಂತೆ ಅಧಿಕಾರಿಗಳು ಜವಾಬ್ದಾರಿ ನಿಭಾಯಿಸಬೇಕು’ ಎಂದು ಡೀಸಿ ಸೂಚಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಚಂಡಮಾರುತ ವಿಪತ್ತು ನಿರ್ವಹಣೆ ಅಣಕು ಕಾರ್ಯಾಚರಣೆಯ ಪೂರ್ವಸಿದ್ಧತೆ ಕುರಿತು ಸಭೆ ನಡೆಸಿದ ಅವರು `ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ಗೃಹ ವ್ಯವಹಾರಗಳ ಸಚಿವಾಲಯದ ನಿರ್ದೇಶನದಂತೆ ಅಂತಾರಾಜ್ಯ ಮಟ್ಟದ ಅಣಕು ಕಾರ್ಯಾಚರಣೆ ನಡೆಯಲಿದೆ. ಕಾರವಾರದ ಕ್ರಿಮ್ಸ್ ಆಸ್ಪತ್ರೆ, ಕುಮಟಾ ಬಸ್ ನಿಲ್ದಾಣ, ಹೊನ್ನಾವರದ ಕಾಸರಕೋಡು ಹಿನ್ನೀರಿನ ಪ್ರದೇಶ, ಮುರುಡೇಶ್ವರ ಬೀಚ್, ತದಡಿ ಬಂದoರು, ಅಂಕೋಲಾ ರೈಲ್ವೆ ನಿಲ್ದಾಣದಲ್ಲಿ ಅಣಕು ಕಾರ್ಯಚರಣೆಯ ವಿವಿಧ ಚಟುವಟಿಕೆಗಳನ್ನು ನಡೆಸಲು ನಿರ್ಧರಿಸಲಾಗಿದೆ. ಈ ಅಣಕು ಕಾರ್ಯಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದು ತಿಳಿಸಿದರು.
`ಕಾರ್ಯಚರಣೆಯ ಅಂಗವಾಗಿ ಸಾರ್ವಜನಿಕರ ರಕ್ಷಣೆ, ಪುರ್ನವಸತಿ, ಸ್ಥಳಾಂತರ, ಚಿಕಿತ್ಸೆ ನೀಡುವ ಚಟುವಟಿಕೆಗಳಿಗೆ ಅಗತ್ಯವಿರುವ ಸ್ಥಳಗಳ ಗುರುತು ಮತ್ತು ಅಗತ್ಯವಿರುವ ಸಂಪನ್ಮೂಲಗಳನ್ನು ಸಿದ್ದಪಡಿಸಿಕೊಳ್ಳುವಂತೆ ತಿಳಿಸಿದ ಅವರು ಎಲ್ಲಾ ಚಟುವಟಿಕೆಗಳಲ್ಲಿ ಭಾಗಿಯಾಗಲು ಆಪದ ಮಿತ್ರರು ಮತ್ತು ಸ್ವಯಂ ಸೇವಾ ಸಂಘಟನೆಗಳ ಸದಸ್ಯರ ನೆರವು ಪಡೆಯಬೇಕು’ ಎಂದು ತಿಳಿಸಿದರು. `ಈ ಅಣಕು ಕಾರ್ಯಚರಣೆಯು ನಾವು ವಿಪತ್ತು ಸಂದರ್ಭದಲ್ಲಿ ಸಾರ್ವಜನಿಕರ ರಕ್ಷಣೆ ಮತ್ತು ವೈದ್ಯಕೀಯ ನೆರವು ಒದಗಿಸಲು ಹೇಗೆ ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಸ್ಪಂದಿಸುತ್ತೇವೆ ಎಂಬುದರ ಕುರಿತು ಸ್ವಯಂ ಪರೀಕ್ಷೆಯಾಗಿದ್ದು, ಈ ಚಟುವಟಿಕೆಯಲ್ಲಿ ಎಲ್ಲಾ ಅಧಿಕಾರಿಗಳು ನೈಜ ಸಂದರ್ಭದಲ್ಲಿ ಕಾರ್ಯನಿರ್ವಹಿಸುವ ರೀತಿಯಲ್ಲಿಯೇ ತಮ್ಮ ಜವಾಬ್ದಾರಿಗಳನ್ನು ಅರಿತು ಹಾಗೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು, ಯಾವುದೇ ರೀತಿಯ ನಿರ್ಲಕ್ಷö್ಯ ತೋರಬಾರದು’ ಎಂದರು.
`ಕಾರ್ಯಚರಣೆಯಲ್ಲಿ ಕಂದಾಯ, ಪೊಲೀಸ್, ಅಗ್ನಿಶಾಮಕ ಸೇರಿದಂತೆ ಒಟ್ಟು 34 ಇಲಾಖೆಗಳ ಅಧಿಕಾರಿಗಳು ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದೆ. ಪ್ರತಿಯೊಂದು ಸ್ಥಳದಲ್ಲಿ ನೆಡೆಯುವ ಅಣಕು ಕಾರ್ಯಚರಣೆಗೆ ಇನ್ಸಿಡೆಂಟ್ ಕಮಾಂಡರ್‌ಗಳನ್ನಾಗಿ ಉಪ ವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್‌ಗಳನ್ನು ನೇಮಕ ಮಾಡಲಾಗಿದ್ದು, ಈ ಸಂಪೂರ್ಣ ಕಾರ್ಯಾಚರಣೆಯ ಪರಿಶೀಲನೆ ಮತ್ತು ವೀಕ್ಷಣೆ ಮಾಡಲು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ವಿಶೇಷ ವೀಕ್ಷಕರನ್ನು ನೇಮಿಸಲಾಗಿದೆ’ ಎಂದರು. `ಚಂಡಮಾರುತ ಸಮಯದಲ್ಲಿ ಕೈಗೊಳ್ಳುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು, ಸಾರ್ವಜನಿಕರಿಗೆ ನೀಡುವ ರಕ್ಷಣೆ ಮತ್ತು ವೈದ್ಯಕೀಯ ನೆರವು ಕ್ರಮಗಳ ಮೂಲಕ ವಿಪತ್ತು ಸಂದರ್ಭದಲ್ಲಿ ಸಂಭವಿಸಬಹುದಾದ ಹಾನಿಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಸಾಧ್ಯವಾಗಲಿದೆ’ ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್ ಮತ್ತು ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಇದ್ದರು.