ಶಿರಸಿ ಬಿಳೂರು ಪದವಿ ಪೂರ್ವ ಕಾಲೇಜು ಪ್ರಾಚಾರ್ಯೆ ಪುಷ್ಪಲತಾ ಅವರ ವಿರುದ್ಧ ವಿದ್ಯಾರ್ಥಿಗಳು ಎರಡನೇ ಹಂತದ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತಿಭಟನೆಯ ಬಿಸಿ ತಾಳಲಾರದೇ ಎರಡು ವಾರ ರಜೆಯಲ್ಲಿದ್ದ ಪ್ರಾಚಾರ್ಯೆ ಪುಷ್ಪಲತಾ ಅವರು ಈ ದಿನ ಕಾಲೇಜಿನೊಳಗೆ ಕಾಲಿಟ್ಟಿದ್ದು, ವಿದ್ಯಾರ್ಥಿಗಳ ಆಕ್ರೋಶ ಇನ್ನಷ್ಟು ಹೆಚ್ಚಾಗಿದೆ.
ಶಿರಸಿ ತಾಲೂಕಿನ ಬಿಳೂರು ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳ ನಡುವಿನ ಸಂಘರ್ಷ ಮುಂದುವರಿದಿದೆ. ರಜೆಯ ಮೇಲೆ ತೆರಳಿದ್ದ ಪ್ರಾಂಶುಪಾಲೆ ಪುಷ್ಪಲತಾ ಅವರು ಶುಕ್ರವಾರ ಮತ್ತೆ ಕಾಲೇಜಿಗೆ ಹಾಜರಾದರು. ಕೂಡಲೇ ನೂರಾರು ವಿದ್ಯಾರ್ಥಿಗಳು ಕಾಲೇಜಿನಿಂದ ಹೊರ ಹೋಗಿ ಅಸಮಧಾನವ್ಯಕ್ತಪಡಿಸಿದರು. 15 ದಿನಗಳ ಹಿಂದೆ ಕಾಲೇಜು ಆವರಣದಲ್ಲೇ ಕುಳಿತು `ಡೌನ್ ಡೌನ್ ಪ್ರಿನ್ಸಿಪಾಲ್’ ಎಂದು ವಿದ್ಯಾರ್ಥಿಗಳು ಧಿಕ್ಕಾರ ಕೂಗಿದ್ದರು. ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಾಂಶುಪಾಲೆ ಪುಷ್ಪಲತಾ ಅವರನ್ನು ರಜೆಯ ಮೇಲೆ ಕಳುಹಿಸಿದ್ದರು. ರಜಾ ಅವಧಿ ಮುಗಿದ ಹಿನ್ನಲೆ ಶುಕ್ರವಾರ ಪ್ರಾಂಶುಪಾಲೆ ಪುಷ್ಪಲತಾ ಅವರು ಮತ್ತೆ ಕಾಲೇಜಿಗೆ ಕಾಲಿರಿಸಿದ್ದು, ಅದರಿಂದ ವಿದ್ಯಾರ್ಥಿಗಳು ಸಿಡಿಮಿಡಿಗೊಂಡರು.
ಪ್ರಾಚಾರ್ಯೆ ಪುಷ್ಪಲತಾ ಅವರು ಕಾಲೇಜು ಪ್ರವೇಶಿಸಿದ ಸುದ್ದಿ ಇಡೀ ಕಾಲೇಜಿಗೆ ಹಬ್ಬಿತು. ಎಲ್ಲಾ ಮಕ್ಕಳು ತರಗತಿಯಿಂದ ಹೊರಬಂದು ಮನೆ ಕಡೆ ಹೊರಟರು. `ಪುಷ್ಪಲತಾ ಅವರು ವಿದ್ಯಾರ್ಥಿಗಳನ್ನು ತೀರಾ ಅವಾಚ್ಯ ಶಬ್ದಗಳಿಂದ ಬೈಯುತ್ತಾರೆ, ವಿದ್ಯಾರ್ಥಿಗಳ ಎದುರೇ ಪೋಷಕರಿಗೆ ಹಾಗೂ ಉಪನ್ಯಾಸಕರಿಗೆ ದರ್ಪ ತೋರಿಸಿ ಅಗೌರವದಿಂದ ನಡೆದುಕೊಳ್ಳುತ್ತಾರೆ’ ಎಂಬುದು ವಿದ್ಯಾರ್ಥಿಗಳ ಪ್ರಮುಖ ಆರೋಪವಾಗಿತ್ತು. ಅದೇ ಕಾರಣ ನೀಡಿ, ಈ ದಿನ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲಿಲ್ಲ. `ಪ್ರಾಂಶುಪಾಲರ ವರ್ಗಾವಣೆಯಾಗುವವರೆಗೂ ನಾವು ಯಾವುದೇ ಕಾರಣಕ್ಕೂ ಕಾಲೇಜಿಗೆ ಬರುವುದಿಲ್ಲ’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.