ಕಾರವಾರ ತಾಲೂಕು ಪಂಚಾಯತ ಮಾಜಿ ಸದಸ್ಯ ಪ್ರಶಾಂತ ಗೋವೇಕರ್ ಅವರು ಜನಪ್ರತಿನಿಧಿಯಾಗಿ ಕೆಲಸ ಮಾಡಿದ ವಿಷಯವನ್ನು ಅವರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದು, ಅವರ ಅನಾರೋಗ್ಯ ಪರಿಗಣಿಸಿ ನ್ಯಾಯಾಲಯ ಅವರ ಗಡಿಪಾರು ಆದೇಶ ರದ್ಧು ಮಾಡಿದೆ. ಗಡಿಪಾರು ಆದೇಶ ಪ್ರಶ್ನಿಸಿ ಪ್ರಶಾಂತ ಗೋವೇಕರ್ ಅವರು ಹೈಕೋರ್ಟಿನ ಮೊರೆ ಹೋಗಿದ್ದು, ಮೊದಲು ಇದಕ್ಕೆ ತಡೆಯಾಜ್ಞೆ ನೀಡಿದ್ದ ನ್ಯಾಯಾಲಯ ಸದ್ಯ ಗಡಿಪಾರು ಆದೇಶವನ್ನು ರದ್ಧು ಮಾಡಿದೆ.
Advertisement. Scroll to continue reading.
ಕಾರವಾರದ ಕಿನ್ನರದ ಪ್ರಶಾಂತ ಗೋವೇಕರ್ ಅವರ ವಿರುದ್ಧ ಹಲವು ಪೊಲೀಸ್ ಕೇಸುಗಳಿದ್ದವು. ಈ ಹಿನ್ನಲೆ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶಿಸಲಾಗಿತ್ತು. ಪೊಲೀಸರೇ ಅವರನ್ನು ಹೊಸಪೇಟೆಗೆ ಬಿಟ್ಟು ಬಂದಿದ್ದರು. ಇದನ್ನು ಪ್ರಶ್ನಿಸಿ ಪ್ರಶಾಂತ ಗೋವೇಕರ್ ಅವರು ಹೈಕೋರ್ಟಿನ ಮೊರೆ ಹೋಗಿದ್ದರು. ವಕೀಲ ರಾಮಾ ಗೋರ್ಫಡೆ ಅವರ ಮೂಲಕ ತಮ್ಮ ಅಹವಾಲು ಸಲ್ಲಿಸಿದ್ದರು. ಈ ವೇಳೆ ಸರ್ಕಾರಿ ಪರ ಅಭಿಯೋಜಕರು ಪ್ರಶಾಂತ ಗೋವೇಕರ್ ಅವರನ್ನು ಗಡಿಪಾರು ಮಾಡಿರುವುದಕ್ಕೆ ಸೂಕ್ತ ಕಾರಣಗಳನ್ನು ನೀಡಿದ್ದರು. ಆದರೆ, ರಾಮಾ ಗೋರ್ಫಡೆ ಅವರು ಅದನ್ನು ಅಲ್ಲಗಳೆದು ಆ ಆದೇಶ ರದ್ದು ಮಾಡುವಂತೆ ಕೋರಿದ್ದರು.
ಪ್ರಕರಣ ರದ್ಧತಿ ಕೋರಿ ಅರ್ಜಿ ಸಲ್ಲಿಸಿದವರು ವಿವಿಧ ಕಾಯ್ದೆ ಹಾಗೂ ಕಾನೂನು ವ್ಯಾಪ್ತಿಯ ಬಗ್ಗೆ ವಾದಿಸಿದ್ದರು. ಈ ವೇಳೆ ಆ ಆದೇಶಕ್ಕೆ ನ್ಯಾಯಾಲಯ ತಡೆ ನೀಡಿದ್ದು, ಅದರ ಬಗ್ಗೆಯೂ ವಿಚಾರಣೆ ನಡೆಯಿತು. ನಂತರ ಮತ್ತೆ ಮೂಲ ಪ್ರಕರಣ ಗಮನಿಸಿದ ನ್ಯಾಯಾಲಯ ಬೇರೆ ಬೇರೆ ಕೋರ್ಟುಗಳಲ್ಲಿನ ಆದೇಶವನ್ನು ಗಮನಿಸಿತು. ಈ ವೇಳೆ ಪ್ರಶಾಂತ ಗೋವೇಕರ್ ಅವರು ಅನಾರೋಗ್ಯಕ್ಕೆ ಒಳಗಾಗಿರುವುದನ್ನು ವಕೀಲರು ತಿಳಿಸಿದ್ದು, ಜನಪ್ರತಿನಿಧಿಯಾಗಿ ಕೆಲಸ ಮಾಡಿದ ಬಗ್ಗೆ ದಾಖಲೆಯನ್ನು ಒದಗಿಸಿದರು. ಈ ಎಲ್ಲಾ ಅಂಶಪರಿಗಣಿಸಿದ ನ್ಯಾಯಾಲಯ ಗಡಿಪಾರು ಆದೇಶ ರದ್ಧು ಮಾಡಿತು ಎಂದು ಪ್ರಶಾಂತ ಗೋವೇಕರ್ ಅವರು ಮಾಧ್ಯಮಕ್ಕೆ ಮಾಹಿತಿ ಹಂಚಿಕೊoಡಿದ್ದಾರೆ.
Advertisement. Scroll to continue reading.