ಪೂಜೆಗೆ ಬರುವಂತೆ ಕೋರಿ ಅರ್ಚಕರನ್ನು ಕರೆದು ಕೊಲೆ ಮಾಡಿದ ಮೂವರಿಗೆ ನ್ಯಾಯಾಲಯ ಜೈಲು ಶಿಕ್ಷೆ ನೀಡಿದೆ. ಕುಮಟಾದ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಅವರನ್ನು ಕೊಂದು ತೋಟದಲ್ಲಿ ಹೂತು ಹಾಕಿದ್ದ ಮಂಜುನಾಥ ಹೆಗಡೆ, ಹರೀಶ ಹೆಗಡೆ ಹಾಗೂ ಧನಂಜಯ ನಾಯ್ಕ ಅವರಿಗೆ ಜೀವನಪೂರ್ತಿ ಜೈಲಿನಲ್ಲಿರುವಂತೆ ನ್ಯಾಯಾಲಯ ಆದೇಶಿಸಿದೆ.
ಆರು ವರ್ಷಗಳ ಹಿಂದೆ ಕುಮಟಾ ಕುಂಭೇಶ್ವರದ ವಿಶ್ವೇಶ್ವರ ಭಟ್ಟ ಅವರ ಕೊಲೆ ನಡೆದಿತ್ತು. ಆಸ್ತಿ ವಿವಾದದ ಹಿನ್ನೆಲೆ ಅವರನ್ನು ಕೊಲೆ ಮಾಡಲಾಗಿತ್ತು. ಕುಮಟಾ ತಾಲೂಕಿನ ಮುರೂರಿನ ಕುಂಭೇಶ್ವರ ದೇವಾಲಯದ ಅರ್ಚಕರಾಗಿದ್ದ ವಿಶ್ವೇಶ್ವರ ಭಟ್ ಅವರನ್ನು ಕುಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಮತ್ತು ಸೊರಬ ಮೂಲದ ಧನಂಜಯ ಚಂದ್ರಶೇಖರ್ ನಾಯ್ಕ ಸೇರಿ ಕೊಲೆ ಮಾಡಿರುವುದು ಇದೀಗ ಸಾಭೀತಾಗಿದೆ. ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ ಅವರು, ಕೃತ್ಯವೆಸಗಿದ ಮೂವರು ಅಪರಾಧಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.
2018ರ ಅಕ್ಟೋಬರ್ 16ರಂದು ಭೂಮಿಯ ಪೂಜೆ ಮಾಡಿಕೊಡುವಂತೆ ಅರ್ಚಕರನ್ನು ಕರೆದೊಯ್ದಿದ್ದ ಆ ಮೂವರು ಕುಜಳ್ಳಿಯ ಮಂಜುನಾಥ ಹೆಗಡೆಗೆ ಸೇರಿದ ತೋಟದಲ್ಲಿ ಹೊಡೆದು ಕೊಲೆ ಮಾಡಿದ್ದರು. ಬಳಿಕ ಸಾಕ್ಷ್ಯನಾಶಕ್ಕಾಗಿ ಶವವನ್ನು ಅಲ್ಲಿಯೇ ಗುಂಡಿ ತೋಡಿ ಮುಚ್ಚಿ, ಭಟ್ಟರ ಬೈಕನ್ನು ಸಮೀಪದ ಬಾವಿಗೆ ಎಸೆದು ಪರಾರಿಯಾಗಿದ್ದರು. ಪತಿ ಕಾಣೆಯಾದ ಬಗ್ಗೆ ವಿಶ್ವೇಶ್ವರ ಭಟ್ ಅವರ ಪತ್ನಿ ಸರಸ್ವತಿ ಭಟ್ ನೀಡಿದ ದೂರಿನ ಮೇರೆಗೆ ತನಿಖೆಗಿಳಿದ ಕುಮಟಾದ ಆಗಿನ ಪಿಐ ಸಂತೋಷ್ ಶೆಟ್ಟಿ ಪಿಸೈ ಸಂಪತ್ ಅವರ ತಂಡ ತನಿಖೆ ನಡೆಸಿತ್ತು. ಶವ ಹೊರತೆಗೆದು ಆರೋಪಿತರನ್ನು ಬಂಧಿಸಿತ್ತು.
ವಿಚಾರಣೆ ವೇಳೆ ಸರ್ಕಾರದ ಪರವಾಗಿ ಎಪಿಪಿ ತನುಜಾ ಹೊಸಪಟ್ಟಣ ಅವರು ಬಲವಾದ ಸಾಕ್ಷ್ಯಾಧಾರಗಳನ್ನು ಮಂಡಿಸಿದ್ದರು. ಪ್ರಾಸಿಕ್ಯೂಷನ್ ಒಟ್ಟು 62 ಸಾಕ್ಷಿಗಳನ್ನು, 177 ನಿರ್ಣಾಯಕ ದಾಖಲೆಗಳನ್ನು ಹಾಗೂ 15 ಮುದ್ದೆಮಾಲುಗಳನ್ನು ನ್ಯಾಯಪೀಠಕ್ಕೆ ಸಲ್ಲಿಸಿತ್ತು. ಸಿಸಿಟಿವಿ ದೃಶ್ಯಾವಳಿ, ಸಾಂದರ್ಭಿಕ ಸಾಕ್ಷ್ಯಗಳು ಹಾಗೂ ವಿಧಿವಿಜ್ಞಾನ ವರದಿಗಳ ಆಧಾರದ ಮೇಲೆ ಈ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗಿದೆ.
Advertisement. Scroll to continue reading.
Advertisement. Scroll to continue reading.
Advertisement. Scroll to continue reading.