ಶಿರಸಿಯಲ್ಲಿ ವಾಸವಾಗಿದ್ದ ಪ್ರೇಮಾ ಬಡಿಗೇರ್ ಹಾಗೂ ಅವರ ಮಗ ಅವಿನಾಶ ಬಡಿಗೇರ್ ಹಾವೇರಿಯಲ್ಲಿ ಕೊಲೆಯಾಗಿದ್ದಾರೆ. 20 ವರ್ಷದ ಹಿಂದೆ ಅವರು ಮಾರಾಟ ಮಾಡಲು ಉದ್ದೇಶಿಸಿದ್ದ ಆಸ್ತಿ ವಿಷಯವಾಗಿ ನಡೆದ ಕಲಹ ಕೊಲೆಗೆ ಕಾರಣವಾಗಿದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕೂಸನೂರು ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದೆ. ಪ್ರೇಮಾ ಬಡಿಗೇರ ಅವರು ಹೆಸ್ಕಾಂ’ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅವರ ಮಗ ಅವಿನಾಶ್ ಬಡಿಗೇರ ಅವರು ಫೋಟೋಗ್ರಾಫರ್ ಅಗಿದ್ದರು. 20 ವರ್ಷಗಳ ಹಿಂದಿನ ಆಸ್ತಿ ವಿವಾದವೇ ಅವರ ಸಾವಿಗೆ ಕಾರಣವಾಯಿತು.ತಿರಕಯ್ಯ ಹಾಗೂ ಬಸವರಾಜ್ ಎಂಬುವವರು ಈ ಹಿಂದೆ ಪ್ರೇಮಾ ಅವರ ಬಳಿ ಆಸ್ತಿಯೊಂದನ್ನು ಖರೀದಿ ಮಾಡಿದ್ದರು. ಆದರೆ, ಹಣಕಾಸಿನ ವಿಚಾರಕ್ಕೆ ಶುರುವಾದ ಗಲಾಟೆ ದೊಡ್ಡದಾಗಿದ್ದು, ರಾಜಿ ಪಂಚಾಯತಿ ಸಹ ಬಗೆಹರಿಯಲಿಲ್ಲ. ಕೊನೆಗೆ ಈ ಕೇಸು ಕೋರ್ಟಿಗೆ ಹೋಗಿತ್ತು. ಕೋರ್ಟಿನ ವಿಚಾರಣೆಯಲ್ಲಿ ಪ್ರೇಮಾ ಬಡಿಗೇರ್ ಹಾಗೂ ಅವಿನಾಶ ಬಡಿಗೇರ್ ಅವರಿಗೆ ನ್ಯಾಯ ಸಿಕ್ಕಿದ್ದು, ನ್ಯಾಯ ಸಿಕ್ಕ ಖುಷಿಗೆ ಅವರು ದೇವರ ಪೂಜೆ ಮಾಡಿ ಊರಿಗೆ ಹೋರಟಿದ್ದರು.
ಕೋರ್ಟ್ ಆದೇಶದಂತೆ ತಮ್ಮ ಜಾಗವನ್ನು ವಶಕ್ಕೆ ಪಡೆಯಲು ಪ್ರೇಮಾ ಹಾಗೂ ಅವಿನಾಶ್ ಕೂಸನೂರು ಗ್ರಾಮಕ್ಕೆ ಆಗಮಿಸಿದ್ದರು. ಆದರೆ ಕೋರ್ಟ್ ತೀರ್ಪಿನಿಂದ ಆಕ್ರೋಶಗೊಂಡಿದ್ದ ಎದುರಾಳಿಗಳು ಅವರ ಕೊಲೆಗೆ ಸಂಚು ರೂಪಿಸಿದ್ದರು. ತಾಯಿ-ಮಗ ಊರಿಗೆ ಬರುತ್ತಿದ್ದಂತೆ ಬೀದಿ ಮಧ್ಯೆಯೇ ಅವರ ಮೇಲೆ ಮುಗಿಬಿದ್ದ ಹಂತಕರು, ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಹೊಡೆದು ಕೊಲೆ ಮಾಡಿದ್ದಾರೆ. ಅದಾದ ನಂತರ ಹೆಣ ಬಿದ್ದ ಜಾಗದಲ್ಲೇ ರಕ್ತದ ಮಡುವಿನಲ್ಲಿ ಮೃತದೇಹಗಳ ಮುಂದೆಯೇ ಕೂತು ಊಟ ಮಾಡಿ ವಿಕೃತಿ ಮೆರೆದಿದ್ದಾರೆ.